ಧಾರವಾಡ:
ನೇತಾಜಿ ಸುಭಾಶ್ಚಂದ್ರ ಬೋಸ್, ಹಿರಿಯ ನಟ ಡಾ. ರಾಜಕುಮಾರ ಹೀಗೆ ಅನೇಕ ದಿಗ್ಗಜರ ಭಾಷಣಕ್ಕೆ ಸಾಕ್ಷಿಯಾದ ಕಡಪಾ ಮೈದಾನ ಹಾಗೂ ಕಲಾಭವನ ಹಾಳು ಕೊಂಪೆಯಾಗಿದೆ. ಹೀಗಾಗಿ ಪ್ರಜ್ಞಾವಂತರು ಸೇರಿ ಕಲಾಭವನ ಹಾಗೂ ಕಡಪಾ ಮೈದಾನ ಉಳಿಸಿ ಹೋರಾಟ ಸಮಿತಿ ರಚಿಸಿ ತಾರ್ಕಿಕ ಅಂತ್ಯದ ವರೆಗೂ ಹೋರಾಟ ಮಾಡಲಿದ್ದೇವೆ ಎಂದು ಹಿರಿಯ ಸಾಹಿತಿಗಳಾದ ಡಾ. ವೀರಣ್ಣ ರಾಜೂರ, ಡಾ. ಬಾಳಣ್ಣ ಶೀಗಿಹಳ್ಳಿ ಹಾಗೂ ಶಂಕರ ಹಲಗತ್ತಿ ಹೇಳಿದರು.ಶನಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾಭವನಕ್ಕೆ ಮಲ್ಲಿಕಾರ್ಜುನ ಮನಸೂರರ ಹೆಸರಿಡಲಾಗಿದೆ. ಕಳೆದ ಹಲವು ವರ್ಷಗಳಿಂದ ಬರೀ ದುರಸ್ತಿ ಕಾರ್ಯ ನಡೆದಿರುವುದು ಬೇಸರದ ಸಂಗತಿ. ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.
ವಾರದೊಳಗೆ ನಿಲುವು:ಒಂದು ವಾರದೊಳಗೆ ಕಲಾಭವನ, ಕಡಪಾ ಮೈದಾನ ಸುಸಜ್ಜಿತಗೊಳಿಸಿ, ಸಾರ್ವಜನಿಕರಿಗೆ ಮುಕ್ತಗೊಳಿಸಲು ಪಾಲಿಕೆ ಸ್ಪಷ್ಟ ನಿಲುವು ತೋರಬೇಕು. ನಂತರದಲ್ಲಿ ಜನರಿಗೆ ಕೈಗೆಟುಕುವ ದರ ನಿಗದಿಪಡಿಸಬೇಕು. ನಾಟಕ, ಸಂಗೀತ ಹೀಗೆ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ರಿಯಾಯಿತಿ ನೀಡಬೇಕು. ರಾಜಕೀಯ ಚಟುವಟಿಕೆಗೆ ನೀಡಿದೇ, ಕೇವಲ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲು ಇಡಬೇಕು ಎಂದು ಒತ್ತಾಯಿಸಿದರು.
ಹತ್ತಾರು ಚಳವಳಿಗೆ ನಾಂದಿ ಹಾಡಿದ ಕಡಪಾ ಮೈದಾನ ಹಾಗೂ ಕಲಾಭವನ ಜನರಿಂದ ದೂರ ಇರಿಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ಅಲ್ಲದೇ, ಕಲಾಭವನ ಜಾಗೆಯಲ್ಲಿ ಅತಿಕ್ರಮಣ ಮಾಡಿಕೊಂಡು ತನ್ನ ಕಚೇರಿಗಳನ್ನು ಇಟ್ಟುಕೊಂಡ ಪಾಲಿಕೆಯು ತಕ್ಷಣ ತೆರವುಗೊಳಿಸಬೇಕು. ರಂಗ ಚಟುವಟಿಕೆ ಹಾಗೂ ತರಬೇತಿಗೆ ಮುಕ್ತಗೊಳಿಸಬೇಕು. ಒಂದು ವಾರದಲ್ಲಿ ಈ ತಮ್ಮ ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ಹಾಗೂ ಸರಣಿ ಉಪವಾಸ ಸತ್ಯಾಗ್ರಹಕ್ಕೆ ಸಮಿತಿ ತೀರ್ಮಾನಿಸಿದೆ ಎಂದು ಸ್ಪಷ್ಟಪಡಿಸಿದರು.ಸಂಘಕ್ಕೆ ನೀಡಿ ಕಲಾಭವನ...
ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಸತೀಶ ತುರುಮರಿ ಮಾತನಾಡಿ, ಕಲಾಭವನ ಹಾಗೂ ಕಡಪಾ ಮೈದಾನ ಸುಸಜ್ಜಿತಗೊಳಿಸಿದರೂ, ಪಾಲಿಕೆಗೆ ನಿರ್ವಹಣೆ ಅಸಾಧ್ಯ. ಹೀಗಾಗಿ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನೀಡಿದರೆ, ಸಾಹಿತ್ಯ, ಸಂಗೀತ, ನಾಟಕ ಹಾಗೂ ಕಲೆ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ಶಾಸಕರು ಮತ್ತು ಪಾಲಿಕೆ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.