ಶಿರಸಿ: ಇಲ್ಲಿನ ನಗರದ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಎಲ್ಲ ಹಂತದ ನ್ಯಾಯಾಲಯಗಳ ಒಟ್ಟಾರೆ 19243 ಪ್ರಕರಣಗಳಲ್ಲಿ 16872 ಪ್ರಕರಣಗಳನ್ನು ಶನಿವಾರ ಇತ್ಯರ್ಥಪಡಿಸಲಾಗಿದೆ ಎಂದು ಶಿರಸಿ ತಾಲೂಕು ಕಾನೂನು ಸೇವಾ ಸಮಿತಿ ತಿಳಿಸಿದೆ.

ನ್ಯಾಯಾಧೀಶರಾದ ಹುಲ್ಲೂರ್ ಹೇಮಲತಾ ಬಸಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಾರದಾದೇವಿ ಸಿ. ಹಟ್ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಲ್ತಾಫ್‌ ಹುಸೇನ್ ಸಾಬ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನರೇಂದ್ರ ಪ್ರಕಾಶ ಆರ್. ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಪ್ರಿಯಾಂಕಾ ಚವ್ಹಾಣ ಉಪಸ್ಥಿತರಿದ್ದರು.

ಯಲ್ಲಾಪುರ-ಲೋಕ ಅದಾಲತ್‌ನಲ್ಲಿ 310 ಪ್ರಕರಣ ಇತ್ಯರ್ಥ:

ಯಲ್ಲಾಪುರ ಪಟ್ಟಣದ ನ್ಯಾಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ ಎಸ್. ಅವರ ನೇತೃತ್ವದಲ್ಲಿ ದಾಖಲಾಗಿದ್ದ 64 ಪ್ರಕರಣಗಳ ಪೈಕಿ 45 ಪ್ರಕರಣಗಳು ಇತ್ಯರ್ಥಗೊಂಡವು. ₹79.46 ಲಕ್ಷ ಭರಣವಾಯಿತು. ಸಂಧಾನಕಾರರಾಗಿ ವಕೀಲ ರವಿ ಶಿವನಗೌಡ ಪಾಟೀಲ ಕಾರ್ಯನಿರ್ವಹಿಸಿದರು.ಸಿವಿಲ್ ನ್ಯಾಯಾಲಯದಲ್ಲಿ ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ ಅವರ ನೇತೃತ್ವದಲ್ಲಿ ದಾಖಲಾಗಿದ್ದ 320 ಪ್ರಕರಣಗಳಲ್ಲಿ 257 ಪ್ರಕರಣಗಳು ಇತ್ಯರ್ಥಗೊಂಡು, ₹38.65 ಲಕ್ಷ ಭರಣವಾಯಿತು. ವಕೀಲ ಶ್ರೀಕಾಂತ ಚೌಹಾಣ ಸಂಧಾನಕಾರರಾಗಿ ಕಾರ್ಯನಿರ್ವಹಿಸಿದರು. ದಾಖಲಾಗಿದ್ದ 529 ಬ್ಯಾಂಕ್ ಪ್ರಕರಣಗಳಲ್ಲಿ ಕೇವಲ 8 ಪ್ರಕರಣಗಳು ಇತ್ಯರ್ಥಗೊಂಡು, ₹6.63 ಲಕ್ಷ ಭರಣವಾಯಿತು. ‌ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ, ಅಪರ ಸರ್ಕಾರಿ ವಕೀಲ ಎನ್.ಟಿ. ಗಾಂವ್ಕರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಜಕೀನತ್ ಬಾನು ಶೇಖ್ ಇತರರಿದ್ದರು.

ದಾಂಡೇಲಿಯಲ್ಲಿ ಯಶಸ್ವಿಯಾಗಿ ನಡೆದ ಮೆಗಾ ಲೋಕ್ ಅದಾಲತ್:


ದಾಂಡೇಲಿ ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಶನಿವಾರ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮ ಸಿವಿಲ್ ನ್ಯಾಯಾಧೀಶರಾದ ತೇಜಸ್ವಿನಿ ಸೊಗಲದ್ ಅವರ ಸಮ್ಮುಖದಲ್ಲಿ ಯಶಸ್ವಿಯಾಗಿ ನಡೆಯಿತು.ಸಿವಿಲ್ ನ್ಯಾಯಾಧೀಶೆ ತೇಜಸ್ವಿನಿ ಸೋಗಲದ ನೇತೃತ್ವದಲ್ಲಿ ನಡೆದ ಈ ಲೋಕ್ ಅದಾಲತ್‌ನಲ್ಲಿ ವಿಚಾರಣೆಗೆ 393 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. 46 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಇತ್ಯರ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ₹1,38,82,189 ದಂಡ ಸಂಗ್ರಹ ಮಾಡಲಾಯಿತು.ಮೆಗಾ ಲೋಕ್ ಅದಾಲತ್ ಸಂಧಾನಕಾರರಾಗಿ ವಕೀಲರಾದ ಶೈಲಾ ನಾಯ್ಕ, ಸಹಾಯಕ ಸರ್ಕಾರಿ ವಕೀಲ ರಮೇಶ ಎಂ. ಬಂಕಾಪುರ ಕಾರ್ಯನಿರ್ವಹಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಐಸಿ ನಾಯಕ್ ಇದ್ದರು.