ಉಡುಪಿ: ಸೆ. 4ರಿಂದ ಕೃಷ್ಣಜನ್ಮಾಷ್ಟಮಿ ಸಂಭ್ರಮ

KannadaprabhaNewsNetwork |  
Published : Aug 26, 2026, 03:00 AM IST
ಪರ್ಯಾಯ ಶಿರೂರು ಶ್ರೀಗಳು ಕೃಷ್ಣಾಷ್ಟಮಿಯ ಪ್ರಯುಕ್ತ ಸ್ಪರ್ಧೆಗಳಿಗೆ ಚಾಲನೆ ನೀಡಿದರು | Kannada Prabha

ಸಾರಾಂಶ

ಕೃಷ್ಣಮಠದಲ್ಲಿ ಪರ್ಯಾಯ ಶಿರೂರು ಮಠದ ವತಿಯಿಂದ ಕೃಷ್ಣಜನ್ಮಾಷ್ಟಮಿಯನ್ನು ಸೆ. 4 ರಿಂದ 6 ರವರೆಗೆ ಆಚರಿಸಲಾಗುವುದು ಎಂದು ಪರ್ಯಾಯ ಪೀಠಾಧೀಶ ಶ್ರೀವೇದವರ್ಧನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಉಡುಪಿ: ಕೃಷ್ಣಮಠದಲ್ಲಿ ಪರ್ಯಾಯ ಶಿರೂರು ಮಠದ ವತಿಯಿಂದ ಕೃಷ್ಣಜನ್ಮಾಷ್ಟಮಿಯನ್ನು ಸೆ. 4 ರಿಂದ 6 ರವರೆಗೆ ಆಚರಿಸಲಾಗುವುದು ಎಂದು ಪರ್ಯಾಯ ಪೀಠಾಧೀಶ ಶ್ರೀವೇದವರ್ಧನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಕೃಷ್ಣಾಷ್ಟಮಿಯ ಪ್ರಮುಖ ಕಾರ್ಯಕ್ರಮವಾಗಿ ಸೆ. 4 ರಂದು ಮಧ್ಯರಾತ್ರಿ 12.12ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ನೆರವೇರಲಿದೆ ಎಂದು ಅವರು ಹೇಳಿದರು.ಶ್ರೀಗಳು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ವಿವರ ನೀಡಿ ಸೆ. 5ರಂದು ಬೆಳಗ್ಗೆ ಮಹಾಪೂಜೆ, ಅನ್ನ ಸಂತರ್ಪಣೆ, ರಾಜಾಂಗಣದಲ್ಲಿ ಹುಲಿವೇಷ ಕುಣಿತ, ಮಧ್ಯಾಹ್ನ 3.30ಕ್ಕೆ ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸವ ಅಂಗವಾಗಿ ರಥಬೀದಿಯಲ್ಲಿ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯ ಮೆರವಣಿಗೆ, ಶಿರೂರು ಮಠದ ಎದುರಿನ ವೇದಿಕೆಯಲ್ಲಿ ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಪ್ರದರ್ಶನ ನಡೆಯಲಿದೆ ಎಂದರು.

ಸೆ. 6ರಂದು ಸಂಜೆ 5 ರಿಂದ ರಾಜಾಂಗಣದಲ್ಲಿ ಜನ್ಮಾಷ್ಟಮಿ ಸಮಾರೋಪ, ಬಹುಮಾನ ವಿತರಣೆ ಮಾಡಲಾಗುವುದು. ಅಂದು ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಶ್ರೀಗಳು ಹೇಳಿದರು.

ಜನ್ಮಾಷ್ಟಮಿ ಅಂಗವಾಗಿ ರಾಜಾಂಗಣದಲ್ಲಿ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದರಲ್ಲಿ ರಾಷ್ಟ್ರೀಯಅಂತಾರಾಷ್ಟ್ರೀಯ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.

ಸೆ. 4ರಂದು ಮುದ್ದುಕೃಷ್ಣ ಸ್ಪರ್ಧೆ, ಸೆ. 3, 4, 5ರಂದು ಮಧ್ವಾಂಗಣದಲ್ಲಿ ಉಂಡೆ, ಚಕ್ಕುಲಿ ತಯಾರಿ. ಸೆ. 5ರಂದು ಶ್ರಾವಣ ಶನಿವಾರ ಭೋಜನ ಶಾಲೆಯಲ್ಲಿ ನೆಲದೂಟಕ್ಕೆ ಬೆಳಿಗ್ಗೆ 9.30ಕ್ಕೆ ಪಲ್ಲ ಪೂಜೆಯನ್ನು ಪರ್ಯಾಯ ಶ್ರೀಗಳು ನೆರವೇರಿಸಿದ ಬಳಿಕ ಅನ್ನ ಪ್ರಸಾದ ವಿತರಣೆಯಾಗಲಿದೆ.

ದೇಶದ ದೋಷ ನಿವಾರಣೆಗೆ ಜಪಯಜ್ಞ: ಇತ್ತೀಚೆಗೆ ನಡೆಸಲಾದ ಅಷ್ಟಮಂಗಲ ಪ್ರಶ್ನಾ ಕಾರ್ಯಕ್ರಮದಲ್ಲಿ ಕಾಳಸರ್ಪ ಯೋಗದಿಂದಾಗಿ ದೇಶಕ್ಕೆ ದೋಷ ಇದೆ ಎಂದು ಕಂಡು ಬಂದಿದೆ. ಈ ದೋಷ ಪರಿಹಾರಕ್ಕಾಗಿ ಡಿಸೆಂಬರ್‌ನೊಳಗೆ 18 ಕೋಟಿ ರಾಮನಾಮ ಜಪ, 1 ಕೋಟಿ ಕೃಷ್ಣನಾಮ ಜಪ ಹಾಗೂ 1 ಲಕ್ಷ ವಿಷ್ಣು ಸಹಸ್ರನಾಮ ಜಪ ಮಾಡಲಾಗುವುದು ಎಂದು ದಿವಾನರು ತಿಳಿಸಿದರು.15 ಕೋಟಿ ರು.ಗಳ ಅಭಿವೃದ್ಧಿ ಯೋಜನೆ: ಶಿರೂರು ಮಠದ ಪರ್ಯಾಯದ ಅವಧಿಯಲ್ಲಿ ಕೃಷ್ಣಮಠದಲ್ಲಿ 15 ಕೋಟಿ ರು. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಯೋಜನೆಗಳು ಭಕ್ತರ, ದಾನಿಗಳ ಸಹಾಯದಿಂದ ಕೈಗೆತ್ತಿಕೊಳ‍್ಳಲಾಗುತ್ತಿದೆ.

ವಸಂತ ಮಹಲ್‌ನ ಮಧ್ವಮೂರ್ತಿಗೆ 3 ಕೋಟಿ ರೂ. ವೆಚ್ಚದಲ್ಲಿ ಬೆಳ್ಳಿ ಕವಚ, ನೈವೇದ್ಯ ಹಾಲು ಕಾಯಿಸುವ ಕೋಣೆ ನಿರ್ಮಾಣಕ್ಕೆ 10 ಲಕ್ಷ ರು. ತರಕಾರಿ ಕಟ್ಟಿಂಗ್, ಕಟ್ಟಿಗೆ ಕಟ್ಟಿಂಗ್, ಗ್ರೈಂಡಿಂಗ್ ಮೆಶಿನ್‌ಗಳಿಗೆ ತಲಾ 2 ಲಕ್ಷ ರು. ಸರತಿ ವ್ಯವಸ್ಥೆಗೆ 50 ಲಕ್ಷ ರು. ಬಯೋಗ್ಯಾಸ್ ವ್ಯವಸ್ಥೆಗೆ 65 ಲಕ್ಷ ರು. ವಯರಿಂಗ್ ದುರಸ್ತಿಗೆ 24 ಲಕ್ಷ ರು. ಬಯೋಮೆಟ್ರಿಕ್ ಸರತಿ ವ್ಯವಸ್ಥೆಗೆ 5 ಲಕ್ಷ ರು. ಬಡಗುಮಾಳಿಗೆ ಕಚೇರಿ ನವೀಕರಣಕ್ಕೆ 15 ಲಕ್ಷ ರು. ಉಚಿತ ಶೌಚಾಲಯ/ಸ್ನಾನಗೃಹ ನಿರ್ಮಾಣಕ್ಕೆ 75 ಲಕ್ಷ ರು.ಬ್ರಹ್ಮರಥಕ್ಕೆ 4 ಚಕ್ರ ಸಹಿತ ಸ್ಟೇರಿಂಗ್ ಮತ್ತು ಸಿಸಿಟಿವಿ ಅಳವಡಿಕೆಗೆ 20 ಲಕ್ಷ ರು. ಹೊಸ ಬಾಯ್ಲರ್ ಅಳವಡಿಕೆಗೆ 22 ಲಕ್ಷ ರು. ಅನ್ನದಾನಕ್ಕೆ 5.25 ಕೋಟಿ ರು. ವೇದ ಪಾರಾಯಣಕ್ಕೆ 2.50 ಕೋಟಿ ರು. ವಿದ್ವಾಂಸರಿಗೆ ಗೌರವ ಧನ 52 ಲಕ್ಷ ರು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಲಕ್ಷ ರು. ವೆಚ್ಚವಾಗಲಿದೆ ಎಂದು ದಿವಾನರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಲಂಗಾರಿನಲ್ಲಿ ಸಮಗ್ರ ಆರೋಗ್ಯ ಅಭಿಯಾನ: 120 ಮಂದಿಗೆ ಉಚಿತ ಆರೋಗ್ಯ ತಪಾಸಣೆ
ಕಸ್ತೂರಿರಂಗನ್ ವರದಿ ಗೊಂದಲ ನಿವಾರಣೆಗೆ ಆಗ್ರಹ