ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಗಳಿಂದ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಕೂಡಲೇ ನಿವಾರಿಸಿ, ಜನರ ಪರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಆಗ್ರಹಿಸಿದರು.
ಕಾರ್ಕಳ: ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಗಳಿಂದ ಉಂಟಾಗಿರುವ ಗೊಂದಲಗಳನ್ನು ಸರ್ಕಾರ ಕೂಡಲೇ ನಿವಾರಿಸಿ, ಜನರ ಪರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ ಆಗ್ರಹಿಸಿದರು.ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಿಂದ ಕಸ್ತೂರಿರಂಗನ್ ವರದಿ ವಿರೋಧಿಸಿ 25ಕ್ಕೂ ಅಧಿಕ ಹೋರಾಟಗಳನ್ನು ನಡೆಸಲಾಗಿದೆ. ಅಂದಿನ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ನೋಟಿಸ್‌ಗಳನ್ನೂ ನೀಡಲಾಗಿತ್ತು. ಇದೀಗ ಮತ್ತೆ ಹೋರಾಟ ಆರಂಭವಾಗಿದ್ದು, ಸರ್ಕಾರಗಳು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದರು.ಪ್ರಸ್ತುತ ರಾಜ್ಯದಲ್ಲಿ 1,446 ಗ್ರಾಮಗಳನ್ನು ಅಧಿಸೂಚನೆಯಲ್ಲಿ ಗುರುತಿಸಲಾಗಿದ್ದು, ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಷ್ಟತೆ ನೀಡಬೇಕು. ಜಿಲ್ಲಾಡಳಿತವು ಕಾಡು ಪ್ರದೇಶ, ಗ್ರಾಮ ಪ್ರದೇಶ ಮತ್ತು ಜನವಸತಿ ಪ್ರದೇಶಗಳನ್ನು ಗುರುತಿಸಿ ಸಮರ್ಪಕವಾಗಿ ಸರ್ವೆ ನಡೆಸಬೇಕು. ವೈಮಾನಿಕ ಸರ್ವೆಯನ್ನು ಒಪ್ಪುವುದಿಲ್ಲ. ಕಸ್ತೂರಿರಂಗನ್ ವರದಿ ಆಧಾರದ ಮೇಲಿನ ಗೊಂದಲಗಳನ್ನು ಸರಿಯಾಗಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಕಾರ್ಕಳ ತಾಲೂಕಿನ 13 ಗ್ರಾಮಗಳ ವಿಚಾರದಲ್ಲೂ ಸ್ಪಷ್ಟತೆ ಅಗತ್ಯವಿದೆ. ಜನವಿರೋಧದ ಹಿನ್ನೆಲೆಯಲ್ಲಿ ಹುಲಿ ಯೋಜನೆಯನ್ನು ತಡೆಹಿಡಿಯಲಾಗಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಗೊಂದಲ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಸತೀಶ್ ಶೆಟ್ಟಿ ತಿಳಿಸಿದರು.ಸಮಿತಿಯ ಕಾರ್ಯದರ್ಶಿ ಹರಿಶ್ಚಂದ್ರ ತೆಂಡುಲ್ಕರ್, ಸಾಮಾಜಿಕ ಕಾರ್ಯಕರ್ತ ಜಗದೀಶ್ ಶೆಟ್ಟಿ ಅಜೆಕಾರು, ಪ್ರಗತಿಪರ ನಾಗರಿಕ ಹೋರಾಟ ಸಮಿತಿ ಕೆರೆಬೆಟ್ಟು ಸಂಜೀವ ಶೆಟ್ಟಿ, ಪ್ರಗತಿಪರ ಕೃಷಿಕ ಸೋಜನ್ ಜೇಮ್ಸ್ ಮತ್ತಿತರರಿದ್ದರು.