ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ ಮನೆಗೆ ಹಾಗೂ ಸ್ಫೋಟದಲ್ಲಿ ಹಾನಿಗೊಳಗಾದ ಕಳವಾರು ಸಂತ ಜೋಸೇಫರ ಚರ್ಚಿಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಭೇಟಿ ನೀಡಿದರು.
ಉಡುಪಿ: ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ ಮನೆಗೆ ಹಾಗೂ ಸ್ಫೋಟದಲ್ಲಿ ಹಾನಿಗೊಳಗಾದ ಕಳವಾರು ಸಂತ ಜೋಸೇಫರ ಚರ್ಚಿಗೆ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಭೇಟಿ ನೀಡಿದರು.
ಅವರು ಮೃತಪಟ್ಟ ಯುವಕ ಮನೀಶ್ ಕರ್ಕಡ ಹೆತ್ತವರಿಗೆ ಸಾಂತ್ವಾನ ಹೇಳಿದರು ಬಳಿಕ ಚರ್ಚಿನ ಧರ್ಮಗುರು ಮೈಕಲ್ ಅವರೊಂದಿಗೆ ಘಟನೆಯಲ್ಲಿ ಚರ್ಚಿಗೆ ಆಗಿರುವ ನಷ್ಟದ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಪ್ರಶಾಂತ್ ಜತ್ತನ್ನ, ಕಳವಾರು ಚರ್ಚ್ ಸೇರಿದಂತೆ ಸುತ್ತಲಿನ 3 ಗ್ರಾಮಗಳ 54 ಮನೆಗಳು, 8 ಪ್ರಾರ್ಥನಾ ಕೇಂದ್ರಗಳಿಗೆ ಹಾನಿಯಾಗಿದೆ. ಚರ್ಚಿನ ಹಂಚು, ಕಿಟಕಿ ಗಾಜುಗಳು ಹಾನಿಗೊಂಡಿದ್ದು, ದುರಸ್ಥಿಗೆ ಲಕ್ಷಾಂತರ ರು.ಗಳ ಅಗತ್ಯವಿದೆ. ಆದರೆ ಎಂಆರ್‌ಪಿಎಲ್ ಆಡಳಿತ, ಸ್ಥಳೀಯ ಶಾಸಕ, ಜಿಲ್ಲಾಡಳಿತವಾಗಲಿ ಸ್ಥಳಕ್ಕೆ ಭೇಟಿ ನೀಡಿ ನಷ್ಟ ಪರಿಶೀಲಿಸದಿರುವುದು ಖಂಡನೀಯ ಎಂದರು.ಹಾನಿಗೊಳಗಾದ 54 ಮನೆ ಮತ್ತು 8 ಪ್ರಾರ್ಥನಾ ಕೇಂದ್ರಗಳಿಗೆ ಆಗಿರುವ ಹಾನಿಯನ್ನು ಜಿಲ್ಲಾಧಿಕಾರಿ ತನಿಖೆ ನಡೆಸಿ ಎಂಆರ್‌ಪಿಎಲ್ ಸಂಸ್ಥೆಯಿಂದಲೇ ನಷ್ಟ ಪರಿಹಾರ ಕೊಡಿಸುವಂತೆ ಹಾಗೂ ಮೃತ ಮನಿಶ್ ಕರ್ಕಡ ಅವರ ಮನೆಯವರಿಗೆ ಕೂಡ ಸೂಕ್ತ ಪರಿಹಾರ ನೀಡುವಂತೆ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಿಎಸ್ಐ ಅಮನ ಮೆಮೊರೀಯಲ್ ಚರ್ಚಿನ ಸಭಾಪಾಲಕ ವಂ|ಅಮೃತ್ ರಾಜ್ ಕೊಡೆ, ಸಿಎಸ್ಐ ಸದರ್ನ್ ಡಯಾಸಿಸ್ ಕಾರ್ಯಕಾರಿ ಸಮಿತಿ ಸದಸ್ಯ ರಾಹುಲ್ ಕರ್ಕಡ, ಯೂತ್ ಫೆಲೋಶಿಪ್ ಕಾರ್ಯದರ್ಶಿ ಸುವೀನ್ ಪಾಲನ್, ಭಾರತೀಯ ಕ್ರೈಸ್ತ ಒಕ್ಕೂಟದ ಗ್ಲಾಡ್ಸನ್ ಕರ್ಕಡ ಹಾಗೂ ಪೀಟರ್ ದಾಂತಿ ಉಪಸ್ಥಿತರಿದ್ದರು.
ಶಾಸಕ ಭರತ್ ಶೆಟ್ಟಿ ಕ್ಷಮೆ ಯಾಚಿಸಬೇಕು
ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಶಾಸಕ ಡಾ. ಭರತ್ ಶೆಟ್ಟಿ ಅವರು ಘಟನೆಯಲ್ಲಿ ಯಾರಿಗೂ ಕೂಡ ಪ್ರಾಣಹಾನಿ ಸಂಭವಿಸಿಲ್ಲ, ಯಾರೂ ಕೂಡ ಗಾಬರಿಯಾಗುವುದು ಬೇಡ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು. ಘಟನೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅವರು ನೀಡಿರುವ ಹೇಳಿಕೆಯಿಂದ ಮೃತ ಯುವಕನ ಮನೆಯವರಿಗೆ ನೋವು ತಂದಿದೆ, ಇದಕ್ಕಾಗಿ ಶಾಸಕರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರಶಾಂತ್ ಜತ್ತನ್ನ ಆಗ್ರಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.