ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಅಮವಾಸ್ಯೆ

KannadaprabhaNewsNetwork | Published : Mar 30, 2025 3:01 AM

ಸಾರಾಂಶ

ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಚಾಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮಾದೇಶ್ವರನಿಗೆ ಬೆಳಗಿನ ಜಾವ ವಿಶೇಷ ಅಭಿಷೇಕ ಪಂಚಾಮೃತ ಅಭಿಷೇಕ, ಧೂಪದ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ಧಾರ್ಮಿಕವಾಗಿ ಬೇಡಗಂಪಣ ಸಮುದಾಯದ ಅರ್ಚಕರು ನೆರವೇರಿಸಿದರು.

ಬೆಳ್ಳಿರಥ ಉತ್ಸವ:

ಮಲೆಮಹದೇಶ್ವರ ಬೆಟ್ಟದಲ್ಲಿ ಅಮಾವಾಸ್ಯೆ ಪೂಜೆಗೆ ಬಂದಿದ್ದ ಭಕ್ತರು ಹಾಗೂ ದೇವಾಲಯದ ವತಿಯಿಂದ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳ ನಡುವೆ ಬೆಳ್ಳಿ ರಥೋತ್ಸವ ನಡೆಯಿತು.

ವಿಶೇಷ ಹೂವಿನ ಅಲಂಕಾರ:

ಮಲೆಮಾದೇಶ್ವರ ಬೆಟ್ಟದಲ್ಲಿ ವಿಶೇಷವಾಗಿ ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ತ ದೇವಾಲಯದ ಪ್ರಾಂಗಣ ಹಾಗೂ ದೇವಾಲಯದ ಸುತ್ತಲೂ ವಿಶೇಷ ವಿವಿಧ ಹೂಗಳಿಂದ ಹಾಗೂ ಹಣ್ಣುಗಳಿಂದ ಅಲಂಕಾರವನ್ನು ಮಾಡಲಾಗಿತ್ತು.

ದಾಸೋಹ ವ್ಯವಸ್ಥೆ:

ಚಂದ್ರಮನ ಯುಗಾದಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಾದೇಶ್ವರ ಬೆಟ್ಟದ ದಾಸೋಹ ಭವನದಲ್ಲಿ ಭಕ್ತಾದಿಗಳಿಗಾಗಿ ಬೆಳಗಿನ ಉಪಹಾರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜನಸ್ತೋಮ:

ಅಮಾವಾಸ್ಯೆ ಪ್ರಯುಕ್ತ ಬೆಳಗಿನ ಜಾವದಿಂದ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟ ಸಿದ್ಧಿಸುವಂತೆ ನಿವೇದನೆ ಮಾಡಿಕೊಂಡು ದೂಪಹಾಕಿ ಪಂಜಿನ ಸೇವೆ, ಉರುಳು ಸೇವೆ ನಡೆಸಿ ಭಕ್ತರು ಉಘೇ ಉಘೇ ಎಂದು ಘೋಷಣೆ ಕೂಗಿದರು.

ಬಿಗಿ ಪೊಲೀಸ್ ಬಂದೋಬಸ್ತ್:

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಉಪ ವಿಭಾಗದ ಡಿವೈಎಸ್ಪಿ ಧರ್ಮೇಂದರ್ ಮಾರ್ಗದರ್ಶನದಲ್ಲಿ ಮಲೆಮಾದೇಶ್ವರ ಬೆಟ್ಟದ ಪೊಲೀಸ್ ಇನ್ಸ್‌ಪೆಕ್ಟರ್ ಜಗದೀಶ್ ಬೆಟ್ಟದ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದ್‌ ಬಸ್ತ್‌ ಕಲ್ಪಿಸಿದ್ದರು.

Share this article