ಸಂಭ್ರಮದಿಂದ ನಡೆದ ಉಳವಿ ಚೆನ್ನ ಬಸವೇಶ್ವರ ರಥೋತ್ಸವ

KannadaprabhaNewsNetwork |  
Published : Feb 25, 2024, 01:47 AM IST
.: ದಾಸೋಹ ಕ್ಕೆ ಸರತಿ ಸಾಲು.: ವಿಭೂತಿ ಕುಂಕುಮ ಗಳ ಅಂಗಡಿ | Kannada Prabha

ಸಾರಾಂಶ

ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅಡಕೇಶ್ವರ, ಮಡಕೇಶ್ವರ, ಉಳವಿ ಚೆನ್ನಬಸವೇಶ್ವರ ಎನ್ನುತ್ತಾ ಹರ ಹರ ಮಹಾದೇವ ಎನ್ನುವ ಉದ್ಘೋಷದೊಂದಿಗೆ ರಥವನ್ನು ಎಳೆಯಲಾಯಿತು.

ಜೋಯಿಡಾ:

ರಾಜ್ಯದ ಪ್ರಮುಖ ಹಾಗೂ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಉಳವಿ ಜಾತ್ರೆ ಶನಿವಾರ ಮಹಾ ರಥೋತ್ಸವದೊಂದಿಗೆ ಸಂಪನ್ನವಾಯಿತು. ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಮಘಾ ನಕ್ಷತ್ರದ ಶುಭ ಗಳಿಗೆಯಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಅಡಕೇಶ್ವರ, ಮಡಕೇಶ್ವರ, ಉಳವಿ ಚೆನ್ನಬಸವೇಶ್ವರ ಎನ್ನುತ್ತಾ ಹರ ಹರ ಮಹಾದೇವ ಎನ್ನುವ ಉದ್ಘೋಷದೊಂದಿಗೆ ರಥವನ್ನು ಎಳೆಯಲಾಯಿತು.ಕಳೆದ 10 ದಿನಗಳಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆದ ಉಳವಿ ಜಾತ್ರೆ ಮಹೋತ್ಸವ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

ಕಳೆದ ಒಂದು ವಾರದಿಂದಲೇ ಶ್ರೀ ಕ್ಷೇತ್ರ ಉಳವಿ ಜನ ಜಂಗುಳಿಯಿಂದ ತುಂಬಿತ್ತು. ಈ ವರ್ಷದ ಜಾತ್ರೆಗೆ ಜನರು ವಾರಗಳ ಮೊದಲೇ ಬಂದು ಸೇರಿದ್ದು ಉಳವಿ ಗ್ರಾಪಂ ಮತ್ತು ಟ್ರಸ್ಟ್ ಕಮಿಟಿಗೆ ಆಶ್ಚರ್ಯ ತಂದಿತ್ತು.ಚಕ್ಕಡಿಗಳು:ಪ್ರತಿ ವರ್ಷದಂತೆ ಈ ವರ್ಷವೂ ಚಕ್ಕಡಿಗಳಲ್ಲಿ ಬಂದ ಭಕ್ತರು ವಾರಗಳ ಕಾಲ ದೇವಾಲಯದ ಪ್ರಾಂಗಣದಲ್ಲೇ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. 1400ಕ್ಕೂ ಹೆಚ್ಚು ಚಕ್ಕಡಿ ಆಗಮಿಸಿದ್ದು 2800ಕ್ಕೂ ಹೆಚ್ಚು ಎತ್ತುಗಳ ಆರೈಕೆಯಲ್ಲಿ ಪಶುಸಂಗೋಪನಾ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಡೆಪ್ಯೂಟಿ ಡೈರೆಕ್ಟರ್ ಮೋಹನ್ ಕುಮಾರ್‌ ಅಸಿಸ್ಟಂಟ್ ಡೈರೆಕ್ಟರ್ ಟಿ.ಎಸ್. ಮಂಜಪ್ಪ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.ಜನಜಂಗುಳಿ:ಎಲ್ಲಿ ನೋಡಿದರೂ ಜನವೋ ಜನ. ಉತ್ತರ ಕನ್ನಡ ಜಿಲ್ಲೆಯ ಜಾತ್ರೆಗಳ ಸೊಬಗೇ ಒಂದು ರೀತಿಯಾದರೆ ಉತ್ತರ ಕರ್ನಾಟಕದ ಜನರೇ ತುಂಬಿರುವ ಈ ಜಾತ್ರೆಯ ಸೊಬಗೇ ಬೇರೆ. ಲಕ್ಷಾಂತರ ಜನರು ಧಾರವಾಡ, ಬೆಳಗಾವಿ, ಕೊಪ್ಪಳ, ಗದಗ, ಬೈಲಹೊಂಗಲ, ಕಲಬುರಗಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರಾಜ್ಯದ ವಿವಿಧ ಪ್ರದೇಶಗಳ ಜೊತೆ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಂದಲೂ ಸಹಸ್ರಾರು ಜನರು ಆಗಮಿಸಿದ್ದರು, ಉತ್ತರ ಕನ್ನಡ ಜಿಲ್ಲೆಯ ಜನರಿಗಿಂತ ಬೇರೆ ಪ್ರದೇಶದ ಜನರೇ ಹೆಚ್ಚಿದ್ದರು ಎಂದು ಹೇಳುವಂತಿತ್ತು.ದಾಸೋಹ:ಲಕ್ಷಾಂತರ ಜನರಿಗೆ ಉಣ ಬಡಿಸಲು ಹಲವು ದಾಸೋಹಗಳು ಅಲ್ಲಲ್ಲಿ ಕಂಡುಬಂದವು. ಈ ದಾಸೋಹಗಳಲ್ಲಿ ನಿರಂತರ ಸೇವೆ ಕಂಡು ಬಂತು. ದೇವಸ್ಥಾನದ ಆಡಳಿತ ಕಮಿಟಿಯ ದಾಸೋಹ ಕೂಡ ನಿರಂತರವಾಗಿ ನಡೆದಿದ್ದು ಇತರ 20ಕ್ಕೂ ಹೆಚ್ಚು ದಾಸೋಹಗಳು, ನೂರಾರು ಚಹ ಅಂಗಡಿಗಳು, ಪಾನೀಯ ಅಂಗಡಿಗಳು ಜನರನ್ನು ಬಿಸಿಲ ಬೇಗೆಯಿಂದ ತಣಿಸಿದವು.ವಿಶಾಲವಾದ ರಥಬೀದಿ:ಕಳೆದ ವರ್ಷ ₹ 7 ಕೋಟಿ ವೆಚ್ಚದಲ್ಲಿ ವಿಶಾಲವಾದ ರಥಬೀದಿ ನಿರ್ಮಿಸಿದ್ದು ಭಕ್ತರಿಗೆ ಇದು ಅನುಕೂಲವಾಗಿದೆ. ಎತ್ತುಗಳನ್ನು ದೇವರ ಮುಂದೆ ತಂದು ಪೂಜಿಸುವ ಭಕ್ತರಿಗೆ ವಿಶಾಲ ರಥಬೀದಿ ಅನುಕೂಲವಾಗಿದೆ. ಅರಣ್ಯ ಇಲಾಖೆ ಬೆತ್ತಗಳನ್ನು ಭಕ್ತರಿಗೆ ಮಾರಾಟಕ್ಕೆ ತಂದರೆ, ವಿವಿಧ ಕಂಪನಿಗಳು ತಮ್ಮ ಪ್ರಚಾರ ಮಾಡುತ್ತಿದ್ದವು. ಗ್ರಾಪಂ ನೀರಿನ ವ್ಯವಸ್ಥೆ , ಪೊಲೀಸ್ ಇಲಾಖೆ ಸುವ್ಯವಸ್ಥೆ ಕೈ ಕೊಂಡರೂ ಭಕ್ತ ಸಾಗರಗಳ ನಡುವೆ ಇವರು ಹೈರಾಣಾಗಿದ್ದು ಕಂಡು ಬಂದಿತು.ಜಾತ್ರೆಗೆ ಶಾಸಕ ಆರ್.ವಿ. ದೇಶಪಾಂಡೆ, ವಿಪ ಸದಸ್ಯ ಗಣಪತಿ ಉಳವೇಕರ್ ಶುಭಕೋರಿದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ, ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ, ಸದಸ್ಯರು ಭಾಗವಹಿಸಿದ್ದರು. ಸಿಪಿಐ ಚಂದ್ರಶೇಖರ ಹರಿಹರ, ಪಿಎಸ್ಐ ಮಹೇಶ ಮಾಳಿ ಭದ್ರತೆ ಒದಗಿಸಿದ್ದರು, ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆಯುವ ಮೂಲಕ ಭಕ್ತರು ಹರಕೆ ಪೂರೈಸಿಕೊಂಡರು. ಜನ-ಜಾನುವಾರುಗಳ ಏಕೈಕ ಜಾತ್ರೆ ಎಂದೇ ಪ್ರಸಿದ್ಧಿ ಪಡೆದ ಉಳವಿ ಜಾತ್ರೆಗೆ ಭಕ್ತರು ಬಂದು ದೇವರ ದರ್ಶನ ಪಡೆಯುವುದೇ ಒಂದು ಭಾಗ್ಯ ಎಂದು ಉತ್ತರ ಕರ್ನಾಟಕದ ಜನ ನಂಬಿಕೆ ಇಟ್ಟಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರ ಕಡಿದಿದ್ದಕ್ಕೆ ವಿಧಾನಸೌಧ ಬಳಿ ಸರ್ಕಾರಿ ಶ್ರೀಗಂಧ ಮರ ಕತ್ತರಿಸಿದ ರೈತ!
ಸಿದ್ದರಾಮಯ್ಯ , ನಾನು ಕದ್ದು ಮುಚ್ಚಿ ಮಾತಾಡಿಲ್ಲ, ನಮ್ಮಲ್ಲಿ ಗೊಂದಲವೂ ಇಲ್ಲ : ಡಿಸಿಎಂ