- ಅದ್ಧೂರಿ ಮೆರವಣಿಗೆ । ಕೊರೆಯುವ ಚಳಿಯಲ್ಲೂ ಹರಕೆ ತೀರಿಸಿದ ಭಕ್ತರು
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾರ್ತಿಕ ಮಾಸದಲ್ಲಿ ಎಲ್ಲೆಡೆ ಉಮಾ ಮಹೇಶ್ವರ ಜಾತ್ರೆ ನಡೆಯುವುದು ಸಾಮಾನ್ಯ. ಆದರೆ ದಾವಣಗೆರೆ ತಾಲೂಕಿನ ನಾಗನೂರು ಗ್ರಾಮದಲ್ಲಿ ಜರುಗುವ ಉಮಾ ಮಹೇಶ್ವರ ಜಾತ್ರೆಯಲ್ಲಿ ಸಾವಿರಾರು ಭಕ್ತರು ಉರುಳು ಸೇವೆ ಮಾಡುವುದು ವಿಶೇಷ.ನಾಗನೂರು ಮತ್ತು ಶಿರಮಗೊಂಡನಹಳ್ಳಿ ಭಕ್ತರಿಂದ ನಡೆಯುವ 3 ದಿನಗಳ ಈ ಜಾತ್ರೆಯಲ್ಲಿ ಅಬಾಲ ವೃದ್ಧರಾದಿಯಾಗಿ ಭಕ್ತರು ಭಾಗಿಯಾಗುತ್ತಾರೆ. ಮಂಗಳವಾರ ಮುಂಜಾನೆ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಗ್ರಾಮದ ರಸ್ತೆಯಲ್ಲಿ ಹರಕೆ ಹೊತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು. ಜಾತ್ರೆ ಹಿನ್ನೆಲೆ ನಾಗನೂರು ಗ್ರಾಮ ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ಉಮಾ ಮಹೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಸಾಯಂಕಾಲ ಭಕ್ತರಿಂದ ಜವಳ, ಹರಕೆ ಅರ್ಪಿಸುವುದು ಮತ್ತು ಕಾರ್ತಿಕ ಕದಳಿ ಮಂಟಪದಲ್ಲಿ ಶ್ರೀ ಉಮಾ ಮಹೇಶ್ವರ ಮತ್ತು ಶ್ರೀ ಆಂಜನೇಯ ಸ್ವಾಮಿ ಪೂಜಿಸಲಾಯಿತು.ಶಿರಮಗೊಂಡನಹಳ್ಳಿಯ ಶ್ರೀ ಚನ್ನಬಸವೇಶ್ವರ ಸ್ವಾಮಿಯನ್ನು ಡೊಳ್ಳು-ಮೇಳಗಳಿಂದ ನಾಗನೂರು ಗ್ರಾಮಸ್ಥರು ಬರಮಾಡಿಕೊಂಡು ಮೆರವಣಿಗೆ ಸಮೇತ ವಿರಾಮ ಮಂಟಪದಲ್ಲಿ ಪವಡಿಸುವುದು, ಅದೇ ದಿನ ರಾತ್ರಿ ಕೋಲಾಟ, ವೀರಗಾಸೆ, ಭಜನೆ ಇತ್ಯಾದಿ ಆಚರಣೆಗಳು ನಡೆದವು.
16ರಂದು ಉರುಳು ಸೇವೆ, ಸ್ವಾಮಿಯನ್ನು ನಡೆ ಮಡಿಯಿಂದ ತೋಟದ ಮಠಕ್ಕೆ ಕರೆದೊಯ್ಯುವುದು, ನಂತರ ಗಂಗೆಪೂಜೆ, ಪ್ರಸಾದ ವಿನಿಯೋಗ, ಮಧ್ಯಾಹ್ನ ಬೆಲ್ಲದ ಬಂಡಿ ಎತ್ತುಗಳನ್ನು ಡೊಳ್ಳು-ಹಲಗೆ ಮೆರವಣಿಗೆ ಮತ್ತು ರಾತ್ರಿ ಶ್ರೀ ದುರುಗಮ್ಮನ ಕಾರ್ತಿಕೋತ್ಸವ ನಡೆಯಿತು.ಡಿ.17ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮಠದಲ್ಲಿ ಪ್ರಸಾದ ವಿನಿಯೋಗ, ಮಧ್ಯಾಹ್ನ ಎತ್ತುಗಳ ಮೆರವಣಿಗೆ, ಸಂಜೆ ಮುಡುಪು, ಹರಕೆಯನ್ನು ತೋಟದ ಮಠಕ್ಕೆ ಮೆರದಣಿಗೆ ಮುಖಾಂತರ ಅರ್ಪಿಸುವುದು ಮತ್ತು ಮಠದ ಗದ್ದಿಗೆಯಿಂದ ಸ್ವಾಮಿಯನ್ನು ಗ್ರಾಮಸ್ಥರೆಲ್ಲರೂ ಸೇರಿ ಅದ್ಧೂರಿ ಮೆರವಣಿಗೆಯೊಂದಿಗೆ ಊರೊಳಗೆ ಬರಮಾಡಿಕೊಳ್ಳುವುದು, ನಂತರ ಬಾವುಟ ಹರಾಜು ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು.
- - --16ಕೆಡಿವಿಜಿ31: ಶ್ರೀ ಉಮಾ ಮಹೇಶ್ವರ ಸ್ವಾಮಿ.
-16ಕೆಡಿವಿಜಿ32, 33: ದಾವಣಗೆರೆ ತಾಲೂಕು ನಾಗನೂರಿನಲ್ಲಿ ನಡೆದ ಉಮಾ ಮಹೇಶ್ವರ ಜಾತ್ರೆಯಲ್ಲಿ ಹರಕೆ ಹೊತ್ತ ಭಕ್ತರು ಉರುಳು ಸೇವೆ ಸಲ್ಲಿಸಿದರು.