ಶರಾವತಿ ಹಿನ್ನೀರಿನಲ್ಲಿ ಅನಧಿಕೃತ ಬೋಟಿಂಗ್ ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Oct 14, 2023 1:01 AM

ಸಾರಾಂಶ

ಹೊನ್ನಾವರ ತಾಲೂಕಿನ ಕಾಸರಕೋಡಿನ ಶರಾವತಿ ಹಿನ್ನೀರಿನಲ್ಲಿ ಅನಧಿಕೃತ ಬೋಟಿಂಗ್ ನಡೆಸುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಪಂ ಎದುರು ಮೀನುಗಾರಿಕೆ ದೋಣಿ ಹಾಗೂ ಬಲೆ ತಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಕಾಸರಕೋಡಿನ ಶರಾವತಿ ಹಿನ್ನೀರಿನಲ್ಲಿ ಅನಧಿಕೃತ ಬೋಟಿಂಗ್ ನಡೆಸುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಗ್ರಾಪಂ ಎದುರು ಮೀನುಗಾರಿಕೆ ದೋಣಿ ಹಾಗೂ ಬಲೆ ತಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಕಾಸರಕೋಡು ಗ್ರಾಪಂ ವ್ಯಾಪ್ತಿಯ ಮೀನುಗಾರರು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು. ಅನಧಿಕೃತ ಬೋಟಿಂಗ್ ವಿರುದ್ಧ ಹಲವು ಬಾರಿ ಗ್ರಾಪಂಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೋಟ್ ಹಾಗೂ ಮೀನುಗಾರಿಕೆ ಬಲೆ ಸಮೇತ ಆಗಮಿಸಿದ ಪ್ರತಿಭಟನೆಕಾರರು ಗ್ರಾಪಂ ಎದುರು ಇರಿಸಿ ಟೂರಿಸ್ಟ್ ಬೋಟ್ ತೊಲಗಿಸಿ ಎಂದು ವಿನೂತನವಾಗಿ ಪ್ರತಿಭಟಿಸಿದರು. ಕಾಸರಕೋಡು ಗ್ರಾಪಂ ಅಧ್ಯಕ್ಷೆ ಮಂಕಾಳಿ ಹರಿಜನ, ಪಿಡಿಒ ನಾಗರಾಜ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಿಡಿಒ ನಾಗರಾಜ ಭರವಸೆ ನೀಡಿದರು.

ಆನಂತರ ಮಾಧ್ಯಮದವರೊಂದಿಗೆ ಮೀನುಗಾರ ಯುವಕ ನಟೇಶ್ ತಾಂಡೇಲ ಮಾತನಾಡಿ, ಮೀನುಗಾರಿಕೆ ನಮ್ಮ ಕುಲಕಸುಬಾಗಿದ್ದು, ಇತ್ತೀಚಿನ ವರ್ಷದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ಅನಧಿಕೃತ ಬೋಟಿಂಗ್ ದಂಧೆಯಿಂದ ಮೀನುಗಾರಿಕೆಗೆ ತೊಡಕುಂಟಾಗಿದೆ. ಇಂದು ಸಾಂಕೇತಿಕವಾಗಿ ದೋಣಿ ಹಾಗೂ ಮೀನುಗಾರಿಕೆ ಪರಿಕರ ತಂದು ಪ್ರತಿಭಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದೆ ಹೋದಲ್ಲಿ ಜಿಲ್ಲಾಧಿಕಾರಿ, ತಾಲೂಕು ಕಚೇರಿ ಎದುರು ಮೀನುಗಾರಿಕೆಯ ಸಲಕರಣೆಯೊಂದಿಗೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಶರಾವತಿ ನದಿಯಲ್ಲಿ ಅನಧಿಕೃತವಾಗಿ ಬೋಟಿಂಗ್ ನಡೆಯುತ್ತಿದೆ. ಮಹಿಳೆಯರು ಸ್ನಾನ ಮಾಡುತ್ತಿರುವಾಗ ಡ್ರೋನ್ ಹಾರಾಟ ನಡೆಸುವುದರಿಂದ ಮಹಿಳೆಯರ ಮಾನಕ್ಕೆ ಕುಂದುಂಟಾಗಿ ಸುರಕ್ಷತಗೆ ಧಕ್ಕೆಯಾಗುತ್ತಿದೆ. ವರ್ಷದಿಂದ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೀನುಗಾರರು ಸಾಯಬೇಕೋ, ಬದುಕಬೇಕೋ ಎನ್ನುವುದನ್ನು ಅಧಿಕಾರಿಗಳು ನಿರ್ಧರಿಸಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶ ಮಾಡಿ ಮೀನುಗಾರರರಿಗೆ ನ್ಯಾಯ ಒದಗಿಸಬೇಕು. ಗಲಭೆ ಆಗುವ ಮುನ್ನ ತಾಲೂಕು ಕೇಂದ್ರದಲ್ಲಿ ಸಭೆ ನಡೆಸಿ, ಸಮಸ್ಯೆಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಮುಂದೆ ಉದ್ಭವಿಸುವ ಸಮಸ್ಯೆಗೆ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಮೀನುಗಾರ ಮುಖಂಡರಾದ ಉಮೇಶ್ ಮೇಸ್ತ ಆಡಳಿತ ವರ್ಗಕ್ಕೆ ಎಚ್ಚರಿಕೆ ನೀಡಿದರು.

ಮೀನಿನ ಸಂತತಿ ಹೆಚ್ಚಳವಾಗಲಿ ಎಂದು ಅರಣ್ಯ ಇಲಾಖೆಯವರು ಕಾಂಡ್ಲವನ ಬೆಳೆಸಿದ್ದರು. ಆದರೆ ಇದಿಗ ಅನಧಿಕೃತ ಬೋಟಿಂಗ್‌ನಿಂದ ಮೀನಿನ ಸಂತತಿ ಕ್ಷೀಣಿಸಿದೆ. ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯದಿಂದ ಮೀನುಗಳು ಸಾಯುತ್ತಿವೆ. ಅಕ್ರಮ ಮರಳುಗಾರಿಕೆ ಹಾಗೂ ಪರವಾನಗಿ ಇಲ್ಲದ ಬೋಟಿಂಗ್ ವ್ಯವಸ್ಥೆಯಿಂದ ಮೀನುಗಾರಿಕೆಗೆ ತೊಂದರೆ ಆಗುತ್ತಿದ್ದು, ಮೀನುಗಾರಿಕೆ ಸಚಿವರು ಹಾಗೂ ಅಧಿಕಾರಿಗಳು ಮೀನುಗಾರರ ನೆರವಿಗೆ ಧಾವಿಸಬೇಕು ಎಂದು ಪರ್ಶಿಯನ್ ಬೋಟ್ ಮಾಲೀಕರ ಸಂಘದ ವಿವಿನ್ ಫರ್ನಾಂಡಿಸ್ ಹೇಳಿದರು.

ಸ್ಥಳೀಯರು, ಮೀನುಗಾರ ಮಹಿಳೆಯರು ಸಹ ಪಾಲ್ಗೊಂಡಿದ್ದರು. ಸ್ಥಳಕ್ಕೆ ಪಿಎಸ್‌ಐ ಮಹಾಂತೇಶ್ , ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ನಿಯೋಜಿಸಿದ್ದರು.

Share this article