ಕಾರವಾರದಲ್ಲಿ ಅನಧಿಕೃತ ವಾಸಿಗಳಿಂದ ಪೌರಕಾರ್ಮಿಕರ ಗೃಹಭಾಗ್ಯಕ್ಕೆ ಕುತ್ತು

KannadaprabhaNewsNetwork |  
Published : Jun 19, 2026, 02:30 AM IST
ಕಾರವಾರ ನಗರಸಭೆಯ 42 ಪೌರಕಾರ್ಮಿಕರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಾರವಾರ ನಗರಸಭೆಯ ಕಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಸೂರು ಕಲ್ಪಿಸುವ ಕಾರ್ಯಕ್ಕೆ ಕೆಲವರಿಂದ ಉದ್ದೇಶಪೂರ್ವಕ ಅಡಚಣೆಯಾಗುತ್ತಿದ್ದು, ಅನಧಿಕೃತವಾಗಿ ವಾಸವಿರುವವರನ್ನು ಕೂಡಲೇ ತೆರವುಗೊಳಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾರವಾರ ನಗರಸಭೆಯ 42 ಪೌರಕಾರ್ಮಿಕರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕಾರವಾರ: ನಗರಸಭೆಯ ಕಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ಸೂರು ಕಲ್ಪಿಸುವ ಕಾರ್ಯಕ್ಕೆ ಕೆಲವರಿಂದ ಉದ್ದೇಶಪೂರ್ವಕ ಅಡಚಣೆಯಾಗುತ್ತಿದ್ದು, ಅನಧಿಕೃತವಾಗಿ ವಾಸವಿರುವವರನ್ನು ಕೂಡಲೇ ತೆರವುಗೊಳಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾರವಾರ ನಗರಸಭೆಯ 42 ಪೌರಕಾರ್ಮಿಕರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಕಾರವಾರ ನಗರಸಭೆಯ ಕಾಯಂ ಪೌರಕಾರ್ಮಿಕರಿಗೆ ಸರ್ಕಾರದ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿ ಹಂಚಿಕೆ ಮಾಡಬೇಕಾಗಿದೆ. ಈ ಹಿಂದೆ ಪಂಚರಷಿವಾಡಾದಲ್ಲಿ 16 ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಲಾಗಿತ್ತು. ಆದರೆ, ಕಳೆದ 11 ವರ್ಷಗಳಿಂದ ಹೊಸ ಮನೆಗಳ ನಿರ್ಮಾಣವಾಗಲಿ, ಹಂಚಿಕೆಯಾಗಲಿ ನಡೆದಿಲ್ಲ. ಇದರಿಂದಾಗಿ ಯೋಜನೆಯ ಅರ್ಹ ಫಲಾನುಭವಿಗಳಾಗಿರುವ ಹಲವು ಪೌರಕಾರ್ಮಿಕರು ನಿವೃತ್ತಿಯಾಗಿದ್ದರೂ, ಸ್ವಂತ ಸೂರು ಇಲ್ಲದೆ ಇಂದಿಗೂ ಬಾಡಿಗೆ ಮನೆಗಳಲ್ಲಿ ಪರದಾಡುವಂತಾಗಿದೆ ಎಂದು ಕಾರ್ಮಿಕರು ಮನವಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಪೌರಕಾರ್ಮಿಕರ ನಿರಂತರ ಬೇಡಿಕೆಯ ಮೇರೆಗೆ ಗಾಂಧಿನಗರದಲ್ಲಿರುವ ಹಳೆಯ ಪೌರಕಾರ್ಮಿಕರ ವಸತಿಗೃಹಗಳನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಗೃಹಭಾಗ್ಯ ಯೋಜನೆಯಡಿ ಹೊಸ ಮನೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ 8 ಮನೆಗಳು ನಿರ್ಮಾಣಗೊಂಡಿವೆ. ಉಳಿದ 34 ಪೌರಕಾರ್ಮಿಕರಿಗೆ ಮನೆ ನಿರ್ಮಿಸಲು ಜಾಗದ ತುರ್ತು ಅಗತ್ಯವಿದ್ದು, ಇದಕ್ಕಾಗಿ ನಗರಸಭೆಯ ಪೌರಕಾರ್ಮಿಕರು ತಮ್ಮ ಹಳೆಯ ವಸತಿಗೃಹಗಳನ್ನು ಖಾಲಿ ಮಾಡಿಕೊಟ್ಟಿದ್ದಾರೆ. ಆದರೆ, ನಗರಸಭೆಗೆ ಸಂಬಂಧಪಡದ ಹಾಗೂ ಇತರ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ 7ರಿಂದ 8 ಹೊರಗಿನ ಕುಟುಂಬಗಳು ಪೌರಕಾರ್ಮಿಕರ ವಸತಿಗೃಹಗಳನ್ನು ಅತಿಕ್ರಮಿಸಿಕೊಂಡು ವಾಸಿಸುತ್ತಿವೆ. ಇದರಿಂದಾಗಿ ಉಳಿದ ಪೌರಕಾರ್ಮಿಕರ ಹೊಸ ಮನೆಗಳ ನಿರ್ಮಾಣ ಕಾಮಗಾರಿಗೆ ದೊಡ್ಡ ತೊಡಕು ಉಂಟಾಗಿದೆ ಎಂದು ದೂರಿದ್ದಾರೆ.

ಅತಿಕ್ರಮಿಸಿಕೊಂಡು ವಾಸಿಸುತ್ತಿರುವ ಆ ಕುಟುಂಬಗಳನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಪೌರಕಾರ್ಮಿಕರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಪೌರಕಾರ್ಮಿಕ ಮುಖಂಡರಾದ ಮಂಜುನಾಥ ಶಿರಸಿಕರ, ಮಹಾದೇವ ಶಿರಸಿಕರ, ಮಂಜಾ ಶಿರಸಿಕರ, ಯೋಹಾನ ಗುರುನಾಳ, ಗೋವಿಂದರಾಜ ತಗರಗುಂಟ, ಪೆದ್ದಣ್ಣ ಪೆದ್ದಕೊಂಡಯ್ಯ, ಬಾಲಚಂದ್ರ ಅರ್ಗೇಕರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಣದಲ್ಲಿ ಶೇ. 40 ಜನರಿಗೆ ಬಯಲು ಶೌಚವೇ ಗತಿ!
ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧ: ನಿಸಾರ್ ಅಹಮದ್