- ಸಚಿವ ದರ್ಶನಾಪುರ ಸಹೋದರ ಅಮರೇಶಗೌಡರಿಗೆ ಸೇರಿದ ಜಮೀನಿನಲ್ಲಿ ಅಕ್ರಮ ಮರಳು ಗಣಿಗಾರಿಕೆ
ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಹಾರಣಗೇರಾ ಗ್ರಾಮದ ವ್ಯಾಪ್ತಿಯ ಸರ್ವೆ ನಂಬರ್ 91/7ರಲ್ಲಿ 2.50 ಲಕ್ಷ ರು.ಗಳ ಮೌಲ್ಯದ ಅನಧಿಕೃತವಾಗಿ ಪಟ್ಟಾ ಜಮೀನಿನಲ್ಲಿ ಮರಳು ದಾಸ್ತಾನು ಮಾಡಿದ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಎಂಜಿನೀಯರ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅನಧಿಕೃತವಾಗಿ ಮರಳು ದಾಸ್ತಾನು ಮಾಡಿರುವುದು ಕಂಡು ಬಂದಿದೆ.ಅನಧಿಕೃತವಾಗಿ ಮರಳು ದಾಸ್ತಾನಿರುವ ಪಟ್ಟಾ ಜಮೀನಿನ ಮಾಲೀಕ ಅಮರೇಶಗೌಡ ಪಾಟೀಲ್ ಅವರಿಗೆ ಸೇರಿದ್ದಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ದಾಸ್ತಾನು ಮಾಡಿದ ಪ್ರಮಾಣವನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿ ಅಳತೆ ಮಾಡಿ 308 ಮೆಟ್ರಿಕ್ ಟನ್ ಎಂದು ತಿಳಿಸಿದ್ದಾರೆ. ದಾಸ್ತಾನು ಮಾಡಿದ ಮರಳನ್ನು ಲೋಕೋಪಯೋಗಿ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಸ್ಥಳ ಮಹಜರು ಮಾಡಿದ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಾಂತಪ್ಪ ಸಾಲಿಮನಿ ಅವರು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪರಿಶೀಲನೆ ನಡೆಸಲಾಗಿದೆ ಎಂದು ಕಂದಾಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.--
29ವೈಡಿಆರ್1: ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ವ್ಯಾಪ್ತಿಯ ಸ.ನಂ.91/7ರಲ್ಲಿ ಬುಧವಾರ ಅನಧಿಕೃತವಾಗಿ ಮರಳು ಸಂಗ್ರಹಿಸಿರುವ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.