ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಮಂಡ್ಯ ಸರ್ಕಲ್, ತಾಲೂಕು ಆಡಳಿತ ಸೌಧದ ಮುಂಭಾಗ ಮತ್ತು ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವ್ಯಾಪಾರಸ್ಥರು ಹಣ್ಣು, ತರಕಾರಿ ಮತ್ತು ತಿಂಡಿ- ತಿನಿಸುಗಳನ್ನು ಮಾರಾಟ ಮಾಡುತ್ತಿರುವುದರಿಂದ ಪಾದಚಾರಿಗಳ ಓಡಾಟಕ್ಕೆ ಹಾಗೂ ವಾಹನ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.
ಶುಕ್ರವಾರ ಬೆಳಗ್ಗೆ ಮಂಡ್ಯ ಸರ್ಕಲ್‌ನಲ್ಲಿ ಅನಧಿಕೃತ ಬೀದಿ ಬದಿ ಹಣ್ಣು ಮತ್ತು ತರಕಾರಿ ವ್ಯಾಪಾರಸ್ಥರನ್ನು ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ನಾವು ಕಳೆದ 25 ವರ್ಷಗಳಿಂದಲೂ ಪಟ್ಟಣದಲ್ಲಿ ಹಣ್ಣು, ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ನಮಗೆ ಸೂಕ್ತ ಸ್ಥಳವಿಲ್ಲದ ಕಾರಣ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ನಮ್ಮ ಅಂಗಡಿಗಳನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ವಾಗ್ವಾದಕ್ಕಿಳಿದರು.ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಬೀದಿ ಬದಿಯ ವ್ಯಾಪಾರಸ್ಥರ ಪಟ್ಟಿ ಮಾಡಿ ಪುರಸಭೆ ವಾಣಿಜ್ಯ ಸಂಕೀರ್ಣದ ಒಳಭಾಗದಲ್ಲಿ ಪ್ರತ್ಯೇಕವಾಗಿ ಸ್ಥಳಾವಕಾಶ ಮಾಡಿಕೊಡಲಾಗಿದೆ. ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟಿಸಿ ವ್ಯಾಪಾರ, ವಹಿವಾಟು ನಡೆಸುವರಿಗೆ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಹಾಗಾಗಿ ಬೀದಿ ಬದಿಯ ಹಣ್ಣು, ತರಕಾರಿ ಸೇರಿ ಇನ್ನಿತರೆ ವ್ಯಾಪಾರಸ್ಥರು ನಿಗದಿತ ಸ್ಥಳದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕು ಎಂದರು.
ಅಲ್ಲದೆ ಪಟ್ಟಣದಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿರುವುದರಿಂದ ಜನರ ಓಡಾಟಕ್ಕೆ, ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅಡ್ಡಿಯಾಗುತ್ತಿದೆ. ಇದನ್ನು ಅರ್ಥೈಸಿಕೊಂಡು ತಮಗೆ ನಿಗದಿಪಡಿಸಿರುವ ಸ್ಥಳದಲ್ಲಿಯೇ ವ್ಯಾಪಾರ ಮಾಡಬೇಕು ಎಂದು ಬೀದಿಬದಿ ವ್ಯಾಪಾರಸ್ಥರನ್ನು ಮನವೊಲಿಸಲು ಯತ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಶ್ರೀನಿವಾಸ್, ಪಟ್ಟಣ ವ್ಯಾಪ್ತಿಯ ಫುಟ್‌ಪಾತ್‌ನಲ್ಲಿ ಅಂಗಡಿಗಳು ವ್ಯಾಪಕವಾಗಿ ಹೆಚ್ಚಾಗುತ್ತಿವೆ.
ಈ ಕೂಡಲೇ ಇದನ್ನು ನಿಲ್ಲಿಸದಿದ್ದರೆ ಆಹಾರ ಇಲಾಖೆ ಹಾಗೂ ಸಂಬಂಧಿಸಿದ ಇಲಾಖೆಗೆ ದೂರು ನೀಡಲಾಗುವುದು. ರಸ್ತೆ ಬದಿಯಲ್ಲಿ ತಳ್ಳುವ ಗಾಡಿಗಳು ಬೆಳಗ್ಗೆಯಿಂದ ಸಂಜೆವರೆಗೂ ಒಂದೇ ಸ್ಥಳದಲ್ಲಿ ನಿಂತು ವ್ಯಾಪಾರ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ನಾಗರಾಜು ಸೇರಿದಂತೆ ಸಿಬ್ಬಂದಿ ಇದ್ದರು.