ಅರ್ಥೈಸಿಕೊಂಡು ಸರಳವಾಗಿ ಬೋಧಿಸಿ: ರಾಹುಲ್

KannadaprabhaNewsNetwork | Published : Oct 31, 2024 12:46 AM

ಸಾರಾಂಶ

ಶಾಲೆಯಲ್ಲಿ ಶಿಕ್ಷಕರು ಗಣಿತಶಾಸ್ತ್ರವನ್ನು ಮೊದಲು ತಾವು ಅರ್ಥೈಸಿಕೊಂಡು ಮಕ್ಕಳಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿ ಪಾಠ ಬೋಧಿಸಬೇಕು.

ಗಣಿತಶಾಸ್ತ್ರದ ಪಾಂಡಿತ್ಯ: ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಕೊಪ್ಪಳ

ಶಾಲೆಯಲ್ಲಿ ಶಿಕ್ಷಕರು ಗಣಿತಶಾಸ್ತ್ರವನ್ನು ಮೊದಲು ತಾವು ಅರ್ಥೈಸಿಕೊಂಡು ಮಕ್ಕಳಿಗೆ ಸರಳವಾಗಿ ಅರ್ಥವಾಗುವ ಶೈಲಿಯಲ್ಲಿ ಪಾಠ ಬೋಧಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು, ಕೆ.ಎಸ್.ಸಿ.ಎಸ್.ಟಿ ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವುಗಳ ಸಹಯೋಗದಲ್ಲಿ ಗಣಿತಶಾಸ್ತ್ರದ ಪಾಂಡಿತ್ಯದ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗೆ ಬೋಧನಾ ತಂತ್ರಗಳ ಕುರಿತು ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಗುವಿಗೆ ಪರಿಚಯವಿಲ್ಲದ ಪದ ಸಮಸ್ಯೆಗಳನ್ನು ಪರಿಹರಿಸಲು ಪರಿಕಲ್ಪನೆಯ ಜ್ಞಾನ ಬಳಸುವುದು ಮತ್ತು ಸೂಕ್ತವಾದ ಗಣಿತದ ಶಬ್ದಕೋಶ ಬಳಸಿಕೊಂಡು ಮಕ್ಕಳಿಗೆ ಬೋಧನೆ ಮಾಡುವುದು ಗಣಿತಶಾಸ್ತ್ರದ ಪಾಂಡಿತ್ಯವಾಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಗಣಿತಶಾಸ್ತ್ರವು ತುಂಬಾ ಮುಖ್ಯವಾಗಿದ್ದು, ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ, ಅರ್ಥಪೂರ್ಣವಾಗಿ ಗಣಿತಶಾಸ್ತ್ರ ಕಲಿಸಬೇಕು. ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರದಲ್ಲಿ ಆಸಕ್ತಿ ಬರುವಂತೆ ಪಾಠ ಬೋಧಿಸಬೇಕು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಗಣಿತಶಾಸ್ತ್ರದ ವಿಷಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕು ಎನ್ನುವುದು ನಮ್ಮೆಲ್ಲರ ಉದ್ದೇಶ ಎಂದು ಹೇಳಿದರು.

ಶಿಕ್ಷಕರು ಮಕ್ಕಳ ಕಲಿಕೆಯ ವಾತಾವರಣಕ್ಕೆ ಸರಳ ಮತ್ತು ಸುಲಭವಾಗಿ ಅರ್ಥವಾಗುವ ಬೋಧನಾ ತಂತ್ರ ಬಳಕೆ ಮಾಡಬೇಕು. ಈ ಕಾರ್ಯಾಗಾರ ಶಿಕ್ಷಕರು ಬೋಧನಾ ತಂತ್ರ ಅರಿತುಕೊಳ್ಳಲು ಹಾಗೂ ಮಕ್ಕಳಿಗೆ ಗಣಿತಶಾಸ್ತ್ರದಲ್ಲಿ ಆಸಕ್ತಿ ಬರುವಂತೆ ಮಾಡಲು ಸಹಕಾರಿಯಾಗಿದೆ. ಆದ್ದರಿಂದ ಎಲ್ಲ ಶಿಕ್ಷಕರು ಈ ಕಾಯಾಗಾರದ ಉಪಯೋಗ ಪಡೆದುಕೊಳ್ಳಿ. ನಮ್ಮ ಜಿಲ್ಲೆಯಲ್ಲಿ ಗಣಿತ ವಿಷಯದ ಫಲಿತಾಂಶ ಶೇ.90ಕ್ಕೂ ಹೆಚ್ಚು ಗುರಿ ಹೊಂದಿದ್ದು, ಪ್ರತಿಯೊಬ್ಬ ಗಣಿತಶಾಸ್ತ್ರದ ಶಿಕ್ಷಕರು ಇದರ ಯಶಸ್ವಿಗಾಗಿ ಶ್ರಮಿಸಬೇಕು ಎಂದು ಶಿಕ್ಷಕರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ:

ಇದೇ ವೇಳೆ ಕಾರ್ಯಾಗಾರಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸ್ಪಷ್ಟ, ನೇರವಾಗಿ ಮತ್ತು ರಚನಾತ್ಮಕ ರೀತಿಯಲ್ಲಿ ಏನು ಮಾಡಬೇಕೆಂದು ಮತ್ತು ಹೇಗೆ ಮಾಡಬೇಕೆಂದು ಹೇಳಬೇಕು. ಗಣಿತಶಾಸ್ತ್ರವನ್ನು ಮಕ್ಕಳಿಗೆ ಯಾವ ಭಾಷೆಯ ಶೈಲಿಯಲ್ಲಿ ಹೇಳಿದರೆ ಅವರಿಗೆ ಬೇಗ ಅರ್ಥವಾಗುತ್ತದೆ ಎಂದು ಶಿಕ್ಷಕರು ಅರಿತುಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಕರಿಗೆ ಮಕ್ಕಳ ಬಗ್ಗೆ ಹೆಚ್ಚು ಜ್ಞಾನವಿರಬೇಕು. ಮಕ್ಕಳಿಗೆ ಎಷ್ಟು ಸುಲಭ ಮತ್ತು ಆಸಕ್ತಿದಾಯಕವಾಗಿ ಬೋಧನೆ ಮಾಡುತ್ತೇವೆಯೋ ಅಷ್ಟು ಬೇಗ ಅವರಿಗೆ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸಿದರು.

ಕೆ.ಎಸ್.ಸಿ.ಎಸ್.ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿಗಳಾದ ಡಾ. ಯು.ಟಿ. ವಿಜಯ್ ಪ್ರಾಸ್ತಾವಿಕವಾಗಿ ಮಾತನಾಡಿ ಗಣಿತ ದೈನಂದಿನ ಜೀವನದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಶಿಕ್ಷಕರು ಮಕ್ಕಳನ್ನು ಗಣಿತ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳು ಗಣಿತಶಾಸ್ತ್ರದ ವಿವಿಧ ವಿಷಯಗಳ ಕುರಿತು ವಿವರವಾಗಿ ತರಬೇತಿ ನೀಡಿದರು.

ಕಾರ್ಯಾಗಾರದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಕೆ.ಎಸ್.ಸಿ.ಎಸ್.ಟಿ ಯ ಯೋಜನಾ ಅಭಿಯಂತರರಾದ ಡಾ. ಸೈಯದ್ ಸಮೀರ್, ಗುರುಸ್ವಾಮಿ ಪಿ., ಪ್ರಾಜೆಕ್ಟ್ ಅಸೋಸಿಯೇಟ್ ಕೆಎಸಿಎಸ್‌ಟಿ ಪ್ರಾದೇಶಿಕ ಕೇಂದ್ರ ಕಲಬುರಗಿ ವಿಶ್ವಪ್ರಸನ್ನ ಸೇರಿದಂತೆ ಜಿಲ್ಲೆಯ ಪ್ರೌಢಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Share this article