- - ಅಭ್ಯರ್ಥಿಗಳಾಗಿದ್ದವರಿಂದಲೂ ಪ್ರಯತ್ನ
-ಮಾಜಿ ಶಾಸಕರಾದ ಕಾಂಗ್ರೆಸ್‌ನ ಎಚ್.ಪಿ. ಮಂಜುನಾಥ್- ಹುಣಸೂರು, ಆರ್. ನರೇಂದ್ರ- ಹನೂರು, ಬಿಜೆಪಿಯ ಎಲ್. ನಾಗೇಂದ್ರ- ಚಾಮರಾಜ, ಬಿ. ಹರ್ಷವರ್ಧನ್- ನಂಜನಗೂಡು, ಸಿ.ಎಸ್. ನಿರಂಜನಕುಮಾರ್- ಗುಂಡ್ಲುಪೇಟೆ, ಎನ್. ಮಹೇಶ್- ಕೊಳ್ಳೇಗಾಲ, ಎಂ.ಪಿ. ಅಪ್ಪಚ್ಚು ರಂಜನ್- ಮಡಿಕೇರಿ, ಕೆ.ಜಿ. ಬೋಪಯ್ಯ- ವೀರಾಜಪೇಟೆ, ಜೆಡಿಎಸ್‌ನ ಸಾ.ರಾ. ಮಹೇಶ್- ಕೆ.ಆರ್. ನಗರ, ಕೆ. ಮಹದೇವ್- ಪಿರಿಯಾಪಟ್ಟಣ, ಎಂ. ಅಶ್ವಿನ್ಕುಮಾರ್- ಟಿ. ನರಸೀಪುರ ತೀವ್ರ ಯತ್ನ.- ಇದಲ್ಲದೇ ಕಳೆದ ಬಾರಿ ಅಭ್ಯರ್ಥಿಗಳಾಗಿದ್ದ ಕೃಷ್ಣರಾಜದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ನರಸಿಂಹರಾಜದಲ್ಲಿ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಕಳೆದ ಬಾರಿ ಕೃಷ್ಣರಾಜ ಪ್ರತಿನಿಧಿಸಿದ್ದ ಮಾಜಿ ಸಚಿವ ಎಸ್.ಎ. ರಾಮದಾಸ್, ವರುಣ ಪ್ರತಿನಿಧಿಸಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಂದಲೂ ಪ್ರಚಾರ----ಅಂಶಿ ಪ್ರಸನ್ನಕುಮಾರ್ಕನ್ನಡಪ್ರಭ ವಾರ್ತೆ ಮೈಸೂರುಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಮಾಜಿ ಶಾಸಕರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲೀಡ್ ಕೊಡಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ.ಅವಿಭಜಿತ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಿವೆ. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ 17 ಶಾಸಕರಿದ್ದಾರೆ. ಈ ಪೈಕಿ ಕಾಂಗ್ರೆಸ್- 13, ಜೆಡಿಎಸ್- 3, ಬಿಜೆಪಿ- 1 ಸ್ಥಾನಗಳನ್ನು ಹೊಂದಿವೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಹುಣಸೂರಿನಲ್ಲಿ ಎಚ್.ಪಿ. ಮಂಜುನಾಥ್, ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಆರ್. ನರೇಂದ್ರ ಸೋತ ಪ್ರಮುಖರು. ಈ ಇಬ್ಬರು ಕಾಂಗ್ರೆಸ್ ಪಕ್ಷದವರು. ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂ.ಪಿ. ಅಪ್ಪಚ್ಚು ರಂಜನ್, ವೀರಾಜಪೇಟೆಯಲ್ಲಿ ಕೆ.ಜಿ. ಬೋಪಯ್ಯ ಸೋತಿದ್ದು, ಈ ಇಬ್ಬರು ಬಿಜೆಪಿಯವರು.ಇದಲ್ಲದೇ ಮೈಸೂರು ಜಿಲ್ಲೆಯ ಚಾಮರಾಜದಲ್ಲಿ ಎಲ್. ನಾಗೇಂದ್ರ, ನಂಜನಗೂಡಿನಲ್ಲಿ ಬಿ. ಹರ್ಷವರ್ಧನ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಸಿ.ಎಸ್. ನಿರಂಜನಕುಮಾರ್ ಸೋತಿದ್ದಾರೆ. ಈ ಮೂವರು ಬಿಜೆಪಿಯವರು. ಇದಲ್ಲದೇ ಕಳೆದ ಬಾರಿ ಬಿಎಸ್ಪಿಯಿಂದ ಗೆದ್ದು ನಂತರ ಬಿಜೆಪಿ ಸೇರಿದ್ದ ಎನ್. ಮಹೇಶ್ ಅವರು ಕೊಳ್ಳೇಗಾಲದಲ್ಲಿ ಸೋತಿದ್ದಾರೆ. ಕೃಷ್ಣರಾಜದಲ್ಲಿ ಕಳೆದ ಬಾರಿ ಶಾಸಕ ಎಸ್.ಎ. ರಾಮದಾಸ್ ಸ್ಪರ್ಧಿಸಿರಲಿಲ್ಲ. ಈಗ ಅವರು ಯದವೀರ್ ಪರ ಸಕ್ರಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ.ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಸಾ.ರಾ. ಮಹೇಶ್, ಟಿ. ನರಸೀಪುರದಲ್ಲಿ ಎಂ. ಅಶ್ವಿನ್ ಕುಮಾರ್, ಪಿರಿಯಾಪಟ್ಟಣದಲ್ಲಿ ಕೆ. ಮಹದೇವ್ ಸೋತಿದ್ದಾರೆ. ಈ ಮೂವರು ಜೆಡಿಎಸ್ಗೆ ಸೇರಿದವರು.ಇದಲ್ಲದೇ ಕಳೆದ ಬಾರಿ ಕೃಷ್ಣರಾಜದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತ ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ನರಸಿಂಹರಾಜದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಯಾ ಪಕ್ಷಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.ಕಾಂಗ್ರೆಸ್ನ ಮಾಜಿ ಶಾಸಕರು ತಮ್ಮ ಪಕ್ಷದ ಅಭ್ಯರ್ಥಿ ಎಂ. ಲಕ್ಷ್ಮಣ ಪರ, ಬಿಜೆಪಿ- ಜೆಡಿಎಸ್ ಮಾಜಿ ಶಾಸಕರು ಮೈತ್ರಿಕೂಟದ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇತರ ಮುಖಂಡರ ಪ್ರಚಾರಕಳೆದ ಬಾರಿ ಕೃಷ್ಣರಾಜದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಾಮುಂಡೇಶ್ವರಿಯ ವಿ. ಕವೀಶ್ ಗೌಡ, ಟಿ. ನರಸೀಪುರದ ಡಾ.ರೇವಣ್ಣ, ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾವಿನಹಳ್ಳಿ ಸಿದ್ದೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಕಾರ್ಯಕರ್ತರ ಸಭೆಯಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ವೇದಿಕೆಯಲ್ಲಿ ಕೂರಿಸಿದ್ದಕ್ಕೆ ಕಾರ್ಯಕರ್ತರಿಂದ ಆಕ್ಷೇಪ ವ್ಯಕ್ತವಾಗಿತ್ತು.ಕಳೆದ ಬಾರಿ ವರುಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಡಾ.ಎನ್.ಎಲ್. ಭಾರತಿಶಂಕರ್, ನರಸಿಂಹರಾಜದಲ್ಲಿ ಅಭ್ಯರ್ಥಿಯಾಗಿದ್ದ ಅಬ್ದುಲ್ ಖಾದರ್ ಕಾಂಗ್ರೆಸ್ ಸೇರಿದ್ದಾರೆ. ವರುಣ ಹಾಗೂ ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ವಿ. ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವುದರಿಂದ ಈ ಕಡೆ ಬಂದಿಲ್ಲ. ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಸಿ.ಎಚ್. ವಿಜಯಶಂಕರ್. ಕೆ.ಆರ್. ನಗರದಲ್ಲಿ ಅಭ್ಯರ್ಥಿಯಾಗಿದ್ದ ಹೊಸಹಳ್ಳಿ ವೆಂಕಟೇಶ್ ಮೈತ್ರಿಕೂಟದ ಪರ ಪ್ರಚಾರ ಮಾಡುತ್ತಿದ್ದಾರೆ.