ಸಿದ್ದಾಪುರ: ವಿಶ್ವ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವಂತೆ ಯುನೆಸ್ಕೋ ಸಂಸ್ಥೆಯು ಕೇಂದ್ರ ಸರ್ಕಾರಕ್ಕೆ ನೀಡಿದ ಮಾರ್ಗದರ್ಶನದಿಂದ ಅಘನಾಶಿನಿ ನದಿ ಜೋಡಣೆ ಹೋರಾಟಕ್ಕೆ ಬಲ ಬಂದಿದೆ ಎಂದು ಜಿಪಂ ಮಾಜಿ ಸದಸ್ಯ ಹಾಗೂ ಹಿಂದಿನ ಬೇಡ್ತಿ - ಅಘನಾಶಿನಿ ಕೊಳ್ಳ ಮುಳುಗಡೆ ಯೋಜನೆ ವಿರೋಧ ಸಮಿತಿ ಕಾರ್ಯದರ್ಶಿಯಾಗಿದ್ದ ಎನ್.ವಿ. ಹೆಗಡೆ ಮುತ್ತಿಗೆ ಹೇಳಿದರು.
ಯಾವುದೇ ಅಭಿವೃದ್ಧಿ ಅಥವಾ ನದಿ ಜೋಡಣೆ ಯೋಜನೆಯು ವಿಶ್ವ ಪರಂಪರೆಯ ಸಂರಕ್ಷಣಾ ಚೌಕಟ್ಟುಗಳ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಪರಿಸರ ಸಮತೋಲನಕ್ಕೆ ಹಾನಿ ಮಾಡಬಾರದು ಎಂದು ಯುನಿಸ್ಕೋ ಉತ್ತರಿಸಿದೆ. ಅಲ್ಲದೇ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ವಿರೋಧಿಸಿ ಯುನಿಸ್ಕೋ ವಿಶ್ವ ಪರಂಪರೆ ಕೇಂದ್ರ ೧೯೭೨ರ ವಿಶ್ವ ಪರಂಪರೆಯ ಸಮಾವೇಶದ ಪ್ರಕಾರ ಅಂತಹ ನೈಸರ್ಗಿಕ ಪರಂಪರೆಯ ರಕ್ಷಣೆ ಮತ್ತು ಸಂರಕ್ಷಣೆ ಆಯಾ ದೇಶಗಳ ಜವಾಬ್ದಾರಿಯಾಗಿದೆ. ಇಂತಹ ಪರಿಸರ ಸೂಕ್ಷ್ಮ ವಲಯಗಳಲ್ಲಿನ ಯಾವುದೇ ಯೋಜನೆಯು ಸಂರಕ್ಷಣಾ ನಿಯಮಗಳು ಮತ್ತು ಸುಸ್ಥಿರ ಅಭ್ಯಾಸಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಯುನಿಸ್ಕೋ ಸಂಸ್ಥೆಯು ಪತ್ರದಲ್ಲಿ ಕೇಂದ್ರಕ್ಕೆ ವಾಗ್ದಂಡವನ್ನು ವಿಧಿಸಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಅಘನಾಶಿನಿ ನದಿ ಉಳಿವಿಗೆ ತಾಂತ್ರಿಕ ಮತ್ತು ಕಾನೂನಾತ್ಮಕ ಹೋರಾಟವನ್ನು ಸಾಂಘಿಕ ಸಂಘಟನೆ ಮೂಲಕ ಮುಂದವರೆಸಿಕೊಂಡು ಹೋಗಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ಮಾತನಾಡಿದರು. ಯೋಜನೆಗಳ ಕುರಿತು ಎಂ.ಎಸ್. ನಾಯ್ಕ ನರಮುಂಡಗಿ, ಸಂಕೇತ ನಾಯ್ಕ ಹಲಗೇರಿ, ವಿದ್ಯಾ ನಾಯ್ಕ ಹಾರ್ಸಿಕಟ್ಟಾ, ರಾಜು ನಾಯ್ಕ ಕ್ಯಾದಗಿ, ದಿವಾಕರ್ ನಾಯ್ಕ ಬಾಳೆಜಡ್ಡಿ ಮಾತನಾಡಿದರು. ಹರಿಹರ ನಾಯ್ಕ ತಂಡಾಗುಂಡಿ, ಶ್ರೀಧರ ಹೆಗಡೆ ಕೆರೆಮನೆ, ಎಂ.ಆರ್. ನಾಯ್ಕ ಬೇಡ್ಕಣಿ, ಉಪಸ್ಥಿತರಿದ್ದರು. ಈ ವೇಳೆ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಸಭೆಯು ಅಭಿನಂದಿಸಿತು.