ಲಕ್ಷ್ಮಿದೇವಿ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚಾಲನೆ

KannadaprabhaNewsNetwork | Published : Nov 4, 2024 12:29 AM

ಸಾರಾಂಶ

ಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವರು ಚಾಲನೆ ನೀಡಿದ್ದು, ಈ ಬಾರಿ ಕುಮಾರಸ್ವಾಮಿ ಅವರು ಆಗಮಿಸಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ದೊರೆಯಲಿದೆ .

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಾಗಟೆಮಲ್ಲೇನಹಳ್ಳಿಯಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆಯುವ ಶ್ರೀಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಚಾಲನೆ ನೀಡಿದರು.

ಮೈಸೂರಿನ ಚಾಮುಂಡಿಬೆಟ್ಟದಿಂದ ನೇರವಾಗಿ ಜಾಗಟೆಮಲ್ಲೇನಹಳ್ಳಿಯ ಶ್ರೀಲಕ್ಷ್ಮೀದೇವಿ ದೇವಸ್ಥಾನಕ್ಕೆ ಆಗಮಿಸಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ತಂದೆ ಎಚ್.ಡಿ.ದೇವೇಗೌಡ, ತಾಯಿ ಚೆನ್ನಮ್ಮ, ಪತ್ನಿ ಅನಿತಾ, ಪುತ್ರ ನಿಖಿಲ್‌, ಸೊಸೆ ರೇವತಿ ಹಾಗೂ ಮೊಮ್ಮಗನ ಹೆಸರಿನಲ್ಲಿ ದೇವಿಗೆ ಅರ್ಚನೆ ಮಾಡಿಸಿದರು.

ಈ ವೇಳೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಅವರನ್ನು ಜಾತ್ರಾ ಸಮಿತಿ ಅಧ್ಯಕ್ಷ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಲುವರಾಜು ಅಭಿನಂದಿಸಿದರು.

ನಂತರ ಮಾತನಾಡಿದ ಕೇಂದ್ರ ಸಚಿವರು, ಲಕ್ಷ್ಮೀದೇವಿ ಉದ್ಬವ ಮೂರ್ತಿಯ ಪವಾಡ, ಮಹಿಮೆಯ ಬಗ್ಗೆ ಸಿ.ಎಸ್.ಪುಟ್ಟರಾಜು ಅವರು ನನಗೆ ಮಾಹಿತಿ ನೀಡಿದರು. ನಾನು ಚಾಮುಂಡಿಬೆಟ್ಟಕ್ಕೆ ಪೂಜೆಗೆ ತೆರಳಿ ಅಲ್ಲಿಂದ ನೇರವಾಗಿ ತಾಯಿ ಲಕ್ಷ್ಮೀದೇವಿ ದರ್ಶನ ಪಡೆಯಲು ಆಗಮಿಸಿದ್ದೇನೆ ಎಂದರು.

ಬೆಳಕಿನ ಹಬ್ಬ ದೀಪಾವಳಿಯು ನಿಮ್ಮೆಲ್ಲರ ಕುಟುಂಬಗಳಿಗೂ ಬೆಳಕು ನೀಡಲಿ, ಸುಖ- ಶಾಂತಿ, ನೆಮ್ಮದಿಯಿಂದ ಬದುಕವಂತೆ ಕೃಪೆ ನೀಡಲೆಂದು ಹಾರೈಸುತ್ತೇನೆ. ತಾಯಿ ಲಕ್ಷ್ಮೀದೇವಿ ದೇವಸ್ಥಾನವನ್ನು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಲಕ್ಷ್ಮೀದೇವಿ ಸನ್ನಿದಿಯೂ ಶಕ್ತಿಪೀಠವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಲಕ್ಷ್ಮೀದೇವಿ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವರು ಚಾಲನೆ ನೀಡಿದ್ದು, ಈ ಬಾರಿ ಕುಮಾರಸ್ವಾಮಿ ಅವರು ಆಗಮಿಸಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ದೊರೆಯಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್, ಎಂಎಲ್‌ಸಿ ಮಂಜೇಗೌಡ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಜಾತ್ರಾ ಸಮಿತಿ ಅಧ್ಯಕ್ಷ ಚಲುವರಾಜು, ಮಧುಧೀಕ್ಷಿತ್ ಗುರುಜೀ, ಉದ್ಯಮಿ ಹುಲ್ಕೆರೆಕೊಪ್ಪಲು ಮಧುಸೂದನ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ವಿ.ಎಸ್.ನಿಂಗೇಗೌಡ, ರೈತ ಮುಖಂಡ ರಾಘವ, ಹರವು ಲೋಕೇಶ್ ಹಾಗೂ ಜಾಗಟೆಮಲ್ಲೇನಹಳ್ಳಿ, ಅರಳಕುಪ್ಪೆ, ಶ್ಯಾದನಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Share this article