ಮೇಕೆದಾಟು ಅನುಮತಿಗೆ ಕೇಂದ್ರ ಸಚಿವ ಎಚ್‌ಡಿಕೆ ಸಬೂಬು: ಶಿವನಂಜು

KannadaprabhaNewsNetwork |  
Published : Jul 09, 2025, 12:25 AM IST
೮ಕೆಎಂಎನ್‌ಡಿ-೩ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಶಿವನಂಜು ಮಾತನಾಡಿದರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ವೇಳೆ ನನ್ನನ್ನು ಗೆಲ್ಲಿಸಿ, ನಾನು ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ. ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ವೀರಾವೇಶದ ಮಾತನಾಡಿದ್ದರು. ಈಗ ಕಾಂಗ್ರೆಸ್ ಮಿತ್ರ ಪಕ್ಷವಾದ ತಮಿಳುನಾಡು ಡಿಎಂಕೆ ಸರ್ಕಾರದ ಒಪ್ಪಿಗೆ ಕೊಡಿಸುವಂತೆ ಉಲ್ಟಾ ಹೊಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಸಭಾ ಚುನಾವಣೆ ಸಮಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಜನರಿಗೆ ಕೊಟ್ಟ ಮಾತಿನಂತೆ ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಮತಿ ಕೊಡಿಸುವ ಬದಲು ಸಬೂಬು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ಆರೋಪಿಸಿದರು.

ಲೋಕಸಭೆ ಚುನಾವಣೆ ವೇಳೆ ನನ್ನನ್ನು ಗೆಲ್ಲಿಸಿ, ನಾನು ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ. ಮೇಕೆದಾಟು ಯೋಜನೆಗೆ ಐದೇ ನಿಮಿಷದಲ್ಲಿ ಅನುಮತಿ ಕೊಡಿಸುತ್ತೇನೆ ಎಂದು ವೀರಾವೇಶದ ಮಾತನಾಡಿದ್ದರು. ಈಗ ಕಾಂಗ್ರೆಸ್ ಮಿತ್ರ ಪಕ್ಷವಾದ ತಮಿಳುನಾಡು ಡಿಎಂಕೆ ಸರ್ಕಾರದ ಒಪ್ಪಿಗೆ ಕೊಡಿಸುವಂತೆ ಉಲ್ಟಾ ಹೊಡೆಯುತ್ತಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ವೇಳೆ ಡಿಎಂಕೆ ಒಪ್ಪಿಗೆ ಬೇಕೆಂದು ಕುಮಾರಸ್ವಾಮಿ ಹೇಳಿರಲಿಲ್ಲ. ಇದು ಜಿಲ್ಲೆಯ ಜನರಿಗೆ ಮಂಕುಬೂದಿ ಎರಚುವ ಪ್ರಯತ್ನ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಇಲ್ಲ. ಈ ಯೋಜನೆಗೆ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಅನುಮತಿ ಅಗತ್ಯವಾಗಿರುತ್ತದೆ. ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ತಡೆ ಕೋರಿ ಸಲ್ಲಿಸಿರುವ ಅರ್ಜಿ ಕುರಿತಂತೆ ೧೭೭ ಟಿಎಂಸಿ ನೀರಿನ ಹಕ್ಕಿಗೆ ತೊಂದರೆಯಾಗದ ಹೊರತು ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದಾಗಿ ತಿಳಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಗೊಂಡಲ್ಲಿ ೬೭.೫ ಟಿಎಂಸಿ ನೀರನ್ನು ಶೇಖರಣೆ ಮಾಡಬಹುದು. ಮುಂಗಾರು ವಿಳಂಬವಾದಲ್ಲಿ, ಮಳೆ ಕೊರತೆ ಎದುರಾದ ಸಂದರ್ಭದಲ್ಲಿ ತಮಿಳುನಾಡಿಗೆ ಇಲ್ಲಿಂದ ನೀರು ಹರಿಸಬಹುದು. ಪ್ರತಿ ವರ್ಷ ವಾಡಿಕೆ ಮಳೆಯಾದ ಸಂದರ್ಭದಲ್ಲಿ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದನ್ನು ಹಿಡಿದಿಟ್ಟುಕೊಂಡರೆ ತಮಿಳುನಾಡಿನ ಉಪಯೋಗಕ್ಕೂ ನೀಡಬಹುದು. ಹಾಗೆಯೇ ೪೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಜೊತೆಗೆ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದೆ. ಕಾವೇರಿಕೊಳ್ಳದ ಅಣೆಕಟ್ಟುಗಳಿಂದ ನೀರು ಬಿಡುವ ಒತ್ತಡವೂ ಕಡಿಮೆಯಾಗಲಿದೆ ಎಂದರು.

ನಗರಸಭಾ ಸದಸ್ಯ ಶ್ರೀಧರ್ ಮಾತನಾಡಿ, ಕಾವೇರಿ ಸಮಸ್ಯೆಗೆ ಏಕೈಕ ಪರಿಹಾರವಾಗಿರುವ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಎಚ್.ಡಿ.ಕುಮಾರಸ್ವಾಮಿ ಅವರು ಪ್ರಾಮಾಣಿಕ ಪ್ರಯತ್ನವನ್ನೇ ಮಾಡದೆ ಜನರೆದುರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯಲ್ಲಿ ತಮಿಳುನಾಡಿನ ಒಪ್ಪಿಗೆ ಬೇಕೆಂದರೂ ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಿಕೊಟ್ಟು ಎರಡೂ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯುವ ಪ್ರಯತ್ನವನ್ನಾದರೂ ಕುಮಾರಸ್ವಾಮಿ ನಡೆಸಬಹುದಿತ್ತು. ಅದನ್ನೂ ಮಾಡದೆ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಕುಟುಕಿದರು.

ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದ್ದರೆ, ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಇಚ್ಛಾಶಕ್ತಿ ಇದ್ದರೆ ಸಬೂಬು ಹೇಳುವುದನ್ನು ಬಿಟ್ಟು ಕೊಟ್ಟ ಮಾತಿನಂತೆ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಿ.ಎಂ.ದ್ಯಾವಪ್ಪ, ಕೀಲಾರ ಚನ್ನಪ್ಪ, ಕೀಲಾರ ಕೃಷ್ಣಪ್ಪ, ಜಿ.ಶಿವಲಿಂಗಯ್ಯ, ನಾಗೇಶ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ