ಹೊಸಪೇಟೆ: ದಾಸ ಸಾಹಿತ್ಯವು ಸಾಮಾನ್ಯ ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಜೀವನಾಧಾರಿತ ಸಾಹಿತ್ಯವಾಗಿದೆ. ಸಮಾಜಕ್ಕೆ ಮಾರ್ಗದರ್ಶಕವಾಗುತ್ತದೆ. ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯವನ್ನು ಎರಡು ಕಣ್ಣುಗಳಿಗೆ ಹೋಲಿಸಿ, ತುಂಗಭದ್ರಾ ನದಿಯ ದಂಡೆಯ ಪ್ರದೇಶದಲ್ಲಿ ದಾಸ ಸಾಹಿತ್ಯವು ವಿಶಿಷ್ಟವಾಗಿ ಬೆಳವಣಿಗೆಯಾಗಿದೆ ಎಂದು ಹುಬ್ಬಳ್ಳಿಯ ದಾಸಸಾಹಿತ್ಯ ಸಂಶೋಧಕ ಇಂ. ಭೀಮಸೇನ ಬಡಿಗೇರ ಅವರು ಅಭಿಪ್ರಾಯಪಟ್ಟರು.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪುರಂದರದಾಸ ಅಧ್ಯಯನ ಪೀಠ ಹಾಗೂ ಹಸ್ತಪ್ರತಿಶಾಸ್ತ್ರ ವಿಭಾಗದ ಸಹಯೋಗದಲ್ಲಿ ದಾಸ ಸಾಹಿತ್ಯ: ಪಠ್ಯ ಮತ್ತು ಪರಿಸರ ಶೋಧ ವಿಷಯದ ಕುರಿತು ಮಾತನಾಡಿದರು.
ದಾಸ ದೀಕ್ಷೆಯನ್ನು ಯಾರೂ ಬೇಕಾದರೂ ಸ್ವೀಕರಿಸಬಹುದಾಗಿದೆ. ಅದರಲ್ಲಿ ಯಾವುದೇ ಕುಲ-ಮತ, ಭೇದ ಇರಲಿಲ್ಲ. ಆದರೆ ಅದಕ್ಕಾಗಿ ಅರ್ಹತೆ ಮುಖ್ಯವಾಗಿತ್ತು. ಎಲ್ಲ ವರ್ಗದ ಜನರನ್ನು ಮನದಲ್ಲಿಟ್ಟುಕೊಂಡು ದಾಸ ಸಾಹಿತ್ಯವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಬ್ರಿಟಿಷರು ನಮ್ಮನ್ನು ಆಳಿದರೂ ನಮ್ಮ ಸಾಹಿತ್ಯ ಮತ್ತು ಪರಂಪರೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಸಂಶೋಧನಾ ಕ್ಷೇತ್ರದಲ್ಲಿ ಭಾಷಾ ಜ್ಞಾನ ಮತ್ತು ಸಂಶೋಧಕರ ನಡವಳಿಕೆ ಪ್ರಮುಖವಾಗಿದೆ. ದಾಸ ಸಾಹಿತ್ಯದ ಕುರಿತು ಸಮಗ್ರವಾದ ಅಧ್ಯಯನ ಇನ್ನಷ್ಟು ನಡೆಯಬೇಕಿದೆ ಎಂದು ಅವರು ಸಂಶೋಧನಾರ್ಥಿಗಳಿಗೆ ಸಲಹೆ ನೀಡಿದರು.ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಸ್ತಪ್ರತಿಗಳ ಕ್ಷೇತ್ರದಲ್ಲಿ ವಿಶ್ವವಿದ್ಯಾಲಯದ ಹೊರಗಡೆಯವರೇ ಹೆಚ್ಚು ಕೆಲಸ ಮಾಡುತ್ತಿರುವುದನ್ನು ಗಮನಿಸಬಹುದು. ಜನರಲ್ಲಿ ಇರುವ ಮೌಢ್ಯತೆಗಳಿಂದ ಅನೇಕ ಹಸ್ತಪ್ರತಿಗಳು ನಾಶವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ದಾಸರು ಸಂಚಾರದ ಮೂಲಕ ಊರನ್ನು ತೊರೆದಾಗ ಅವರ ಕುಟುಂಬಗಳ ಸ್ಥಿತಿ ಏನಾಯಿತೆಂಬ ಪ್ರಶ್ನೆಯನ್ನು ಎತ್ತಿ, ಆ ವಿಷಯದ ಮೇಲೂ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ. ಈ ವೇಳೆ ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಸಂಶೋಧನಾ ಕಾರ್ಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಡಾ.ಎಸ್.ಆರ್. ಚನ್ನವೀರಪ್ಪ ಸ್ವಾಗತಿಸಿದರು. ಪ್ರವೀಣ್ ನಿರೂಪಿಸಿದರು.