ವಿಶ್ವವಿದ್ಯಾಲಯಗಳು ಪ್ರಯೋಗ ಮತ್ತು ಹೊಸತನಕ್ಕೆ ಪ್ರೋತ್ಸಾಹಿಸಬೇಕು. ಆಧುನಿಕ ಎಐ ಯುಗಕ್ಕೆ ಬೇಕಾಗುವ ಕೌಶಲ್ಯ ಹೇಳಿಕೊಡಬೇಕೆಂದು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ವಿಶ್ವವಿದ್ಯಾಲಯಗಳು ಪ್ರಯೋಗ ಮತ್ತು ಹೊಸತನಕ್ಕೆ ಪ್ರೋತ್ಸಾಹಿಸಬೇಕು. ಆಧುನಿಕ ಎಐ ಯುಗಕ್ಕೆ ಬೇಕಾಗುವ ಕೌಶಲ್ಯ ಹೇಳಿಕೊಡಬೇಕೆಂದು ವಿಶ್ವವಿದ್ಯಾಲಯಗಳ ಕುಲಾಧಿಪತಿ, ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಹೇಳಿದರು.ನಗರದ ದರ್ಬಾರ್ ಹಾಲ್‌ನಲ್ಲಿ ಶುಕ್ರವಾರ ನಡೆದ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾಲಯಗಳಿಂದ ಪದವಿ ಪಡೆದ ವಿದ್ಯಾರ್ಥಿಗಳು ನೌಕರಿ ಹುಡುಕುವವರಾಗಬಾರದು, ನೌಕರಿ ಸೃಷ್ಟಿಸುವ ಸಾಮರ್ಥ್ಯ ಹೊಂದಬೇಕು. ಅಂತಹ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿ ಅವರ 2047ರ ವಿಕಸಿತ ಭಾತರದ ನಿರ್ಮಾಣಕ್ಕೆ ಯುವ ಪೀಳಿಗೆ ಸಾಥ್ ನೀಡಬೇಕು. ಆಧುನಿಕತೆಯ ಜೊತೆಗೆ ನೈತಿಕತೆ, ಪರಂಪರೆ ಸಂಸ್ಕೃತಿಯಿಂದ ದೇಶ ಮುನ್ನಡೆಯಲು ಸಾಧ್ಯ ಎಂಬುದು ವಿಶ್ವಕ್ಕೆ ತಿಳಿದಿದೆ. ವಸುದೇವ ಕುಟುಂಬಕಂ, ಸರ್ವೇಜನಾಹ ಸುಖೀನೊ ಭವಂತು ಎಂಬ ವೇದವಾಕ್ಯಗಳಿಗೆ ವಿಶ್ವದ ಮನ್ನಣೆ ದೊರೆತಿದೆ ಎಂದು ಹೇಳಿದರು.
ಎಐ, ಡಾಟಾ ವಿಜ್ಞಾನ, ಡಿಜಿಟಲೀಕರಣ ಯುಗದಲ್ಲಿ ನಿರಂತರ ಕಲಿಕೆಯ ಅವಶ್ಯಕತೆ ಎದುರಾಗಿದೆ. ಇದರಿಂದ ಅನೇಕ ಹೊಸ ಸವಾಲುಗಳು ಸೃಷ್ಟಿಯಾಗಿವೆ. ಹೊಸಯುಗಕ್ಕೆ ಹೊಂದಿಕೊಳ್ಳುವ ಶಿಕ್ಷಣ ಪಡೆದು ದೇಶ, ಸಮಾಜದ ಮುಂದಾಳತ್ವ ವಹಿಸಿಕೊಳ್ಳಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ ಎಂದಿಗೂ ಮರೆಯಬಾರದು. ತಾವು ಕಲಿತ ಶಿಕ್ಷಣ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಉಪಯೋಗವಾಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂರು ಜನರಿಗೆ ಡಾಕ್ಟರೇಟ್ ಹಾಗೂ 16 ಜನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕದ ಜೊತೆಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕುಲಪತಿ ಪ್ರೊ.ಆನಂದ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಸೋಮಲಿಂಗ ಗೆಣ್ಣೂರ, ಹಣಕಾಸು ಅಧಿಕಾರಿ ಡಾ.ಚಿದಾನಂದ ಢವಳೇಶ್ವರ ಹಾಗೂ ಸಿಂಡಿಕೇಟ್ ಸದಸ್ಯರು ಇತರರು ವೇದಿಕೆಯಲ್ಲಿದ್ದರು. ಕುಲಸಚಿವೆ ಮೌಲ್ಯಮಾಪನ ಪ್ರೊ.ಲತಾ.ಕೆ.ಪಿ.ವಂದಿಸಿದರು,
---ಬಾಕ್ಸ್----
ತಂತ್ರಜ್ಞಾನ ಜೊತೆಗೆ ಸಂಸ್ಕಾರ, ಸಂಪ್ರದಾಯ ಮರೆಯದಿರಿ:
ಮಹಾರಾಷ್ಟ್ರದ ನಾಗಪುರ ಐಐಎಂನ ನಿರ್ದೇಶಕ ಭೀಮರಾಯ ಮೇತ್ರಿ ಘಟಿಕೋತ್ಸವ ಭಾಷಣ ಮಾಡಿ, ಇಂದಿನ ಯುವ ಪೀಳಿಗೆ ಡಿಜಿಟಲ್ ಯುಗದಲ್ಲಿ ಜನಿಸಿದೆ. ವಿಶ್ವದ ಅತಿಹೆಚ್ಚು ಯುವ ಜನತೆ ದೇಶದಲ್ಲಿದೆ. ಆಧುನಿಕ ಭಾರತದ ಹೊಸ ಇತಿಹಾಸದ ಹೊಸ್ತಿಲಲ್ಲಿದ್ದೀರಿ. ಇಂದು ದೇಶ ಚಲನೆಯಲ್ಲಿದ್ದು, ಭಾರತ ಜಾಗತಿ ಬ್ರ್ಯಾಂಡ್ ಆಗಿದೆ. 2027-28ರಲ್ಲಿ ಭಾರತ 3ನೇ ಅತೀದೊಡ್ಡ ಜೆಡಿಪಿಯೊಂದಿಗೆ ಆರ್ಥಿಕವಾಗಿ ಮುಂದೆ ಬರಲಿದೆ. ಇಂತಹ ಸಂದರ್ಭದಲ್ಲಿ ನಿಮ್ಮನ್ನು ನೀವು ಸೃಷ್ಟಿಸಿಕೊಳ್ಳಬೇಕು. ಸಾಧನೆಗೆ ಮಿತಿಗಳಿಲ್ಲ, ನಿಮ್ಮ ಆಯ್ಕೆಗಳೇ ನಿಮಗೆ ಫಲಿತಾಂಶ ನೀಡಲಿವೆ. ನೀವು ಮಾಡುವ ಯಾವುದೇ ಕೆಲಸದಲ್ಲಿ ಜಾಗತಿಕ ಅತ್ಯುತ್ತಮವಾದುದನ್ನು ಮಾನದಂಡವಾಗಿ ಇರಿಸಿ, ನಿಮ್ಮ ಮುಂದಿನ ಹೆಜ್ಜೆ ಸಮಾಜದಲ್ಲಿ ನಾಯಕನಾಗುವ ಗುರಿ ಹೊಂದಬೇಕು. ಗುರಿಗಳು ಎವರೆಸ್ಟ್ ನಂತಿರಬೇಕು, ಸ್ವಾಮಿ ವಿವೇಕಾನಂದರು ಹೇಳಿದಂತೆ ಅಸಾಧ್ಯವಾದದ್ದನ್ನು ಸಾಧಿಸಬೇಕು, ವಿಭಿನ್ನವಾಗಿ ಧೈರ್ಯ ಮಾಡಿ, ದೊಡ್ಡ ಕಸಸು ಕಾಣಿ, ನಾವೀನ್ಯತೆ, ತಂತ್ರಜ್ಞಾನ ಜೊತೆಗೆ ಸಂಸ್ಕಾರ, ಭಾರತೀಯ ಸಂಪ್ರದಾಯ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.