ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆಯಲ್ಲಿ ಪ್ರವಾಸಿಗರು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಮತ್ತು ಮುತ್ಯಾಲಮಡುವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹವಾನಿಯಂತ್ರಿತ ಬಸ್‌ ಸೌಲಭ್ಯ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬೇಸಿಗೆ ರಜೆಯಲ್ಲಿ ಪ್ರವಾಸಿಗರು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಮತ್ತು ಮುತ್ಯಾಲಮಡುವು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಹವಾನಿಯಂತ್ರಿತ ಬಸ್‌ ಸೌಲಭ್ಯ ಆರಂಭಿಸಿದೆ.

ಇದರೊಂದಿಗೆ ನಿಗಮವು ಈಗಾಗಲೇ ನಡೆಸುತ್ತಿರುವ ರಾಜ್ಯದ ವಿವಿಧ ಪ್ರವಾಸಿತಾಣಗಳ ಪ್ರವಾಸ ಯೋಜನೆ ಜೊತೆಗೆ ಹೊಸ ಪ್ರವಾಸ ಯೋಜನೆ ಸೇರರ್ಪಡೆಯಾಗಿದೆ. ಬನ್ನೇರುಘಟ್ಟ ಮತ್ತು ಮುತ್ಯಾಲಮಡುವಿಗೆ ಯಶವಂತಪುರದಿಂದ ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ 7.15ಕ್ಕೆ ಹವಾನಿಯಂತ್ರಿತ ಬಸ್‌ ಹೊರಡಲಿದೆ. ಈ ಬಸ್‌ 7.30ಕ್ಕೆ ಕೆಂಪೇಗೌಡ ಬಸ್‌ ನಿಲ್ದಾಣ, 7.45ಕ್ಕೆ ಶಾಂತಿನಗರ ಬಸ್‌ ನಿಲ್ದಾಣ ಮತ್ತು 8 ಗಂಟೆಗೆ ಜಯನಗರ ಬಸ್‌ ನಿಲ್ದಾಣದ ಮಾರ್ಗವಾಗಿ ಸಂಚರಿಸಲಿದ್ದು, ಹೆಚ್ಚಿನ ಪ್ರವಾಸಿಗರಿಗೆ ತಮ್ಮ ಮನೆಯ ಬಳಿಯೇ ಬಸ್‌ ಹತ್ತಲು ಅವಕಾಶ ಕಲ್ಪಿಸಲಾಗಿದೆ.

ಪ್ರವಾಸ ಯೋಜನೆಯು ಬನ್ನೇರುಘಟ್ಟ ಮೃಗಾಲಯ, ಸಫಾರಿ-ಚಿಟ್ಟೆ ಉದ್ಯಾನ, ಮುತ್ಯಾಲಮಡುವು-ಬೋಡಿಂಗ್‌ ಸೂರ್ಯಾಸ್ತ ವೀಕ್ಷಣೆ ಒಳಗೊಂಡಿದೆ. ಪ್ರವಾಸಕ್ಕೆ ಒಬ್ಬರಿಗೆ 1,680 ರು. ಶುಲ್ಕ ನಿಗದಿಪಡಿಸಲಾಗಿದೆ. ಈ ದರವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ಎಲ್ಲಾ ರೀತಿಯ ಪ್ರವೇಶ ಶುಲ್ಕಗಳು, ಮುತ್ಯಾಲಮುಡುವಿನಲ್ಲಿ ಬೋಡಿಂಗ್‌, ಬೆಳಗಿನ ಉಪಹಾರ, ಮಧ್ಯಾಹ್ನದ ಭೋಜನ ಹಾಗೂ ಸಂಜೆಯ ಲಘು ಉಪಹಾರ ಶುಲ್ಕ ಒಳಗೊಂಡಿದೆ. ಆಸಕ್ತ ಪ್ರವಾಸಿಗರು ನಿಗಮದ ಯಶವಂತಪುರ ಬುಕ್ಕಿಂಗ್‌ ಕೌಂಟರ್‌, ನಿಗಮ ಅಧಿಕೃತ ಟ್ರಾವೆಲ್‌ ಏಜೆಂಟ್‌ಗಳು ಹಾಗೂ ನಿಗಮದ ವೆಬ್‌ಸೈಟ್‌ ಮೂಲಕ ಮುಂಗಡ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್‌ www.kstdc.co ಅಥವಾ ದೂ: 080 4334 4334/35, 8970650070, 8970650021 ಸಂಪರ್ಕಿಸಬಹುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.