ಮದುವೆಗಳಿಗೆ ಅತಿಥಿ ಸೋಗಿನಲ್ಲಿ ತೆರಳಿ ಕಲ್ಯಾಣ ಮಂಟಪಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮದುವೆಗಳಿಗೆ ಅತಿಥಿ ಸೋಗಿನಲ್ಲಿ ತೆರಳಿ ಕಲ್ಯಾಣ ಮಂಟಪಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಪೀಣ್ಯ ಎರಡನೇ ಹಂತದ ನಿವಾಸಿ ಎಚ್.ಕೆ. ಬಾಬು ಅಲಿಯಾಸ್ ಪಲ್ಸರ್ ಬಾಬು ಬಂಧಿತನಾಗಿದ್ದು, ಆರೋಪಿಯಿಂದ 5.5 ಲಕ್ಷ ರು. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಥಣಿಸಂದ್ರ ಮುಖ್ಯರಸ್ತೆಯ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ ಏಳು ವರ್ಷದ ಬಾಲಕಿಯನ್ನು ಮಾತಾಡಿಸುವ ನೆಪದಲ್ಲಿ ಚಿನ್ನದ ಸರ ದೋಚಿ ಕಿಡಿಗೇಡಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕಮಳೂರಿನ ಹೊನ್ನನಾಯಕನಹಳ್ಳಿ ಗ್ರಾಮದ ಬಾಬು ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಮದುವೆಗಳಲ್ಲಿ ಕಳ್ಳತನಕ್ಕೆ ಆತ ಕುಖ್ಯಾತಿ ಪಡೆದಿದ್ದಾನೆ. ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ. ಮದುವೆಗಳಿಗೆ ಅತಿಥಿ ಸೋಗಿನಲ್ಲಿ ಬಾಬು ತೆರಳುತ್ತಿದ್ದ. ಬಳಿಕ ವಿವಾಹದ ಸಮಾರಂಭದಲ್ಲಿ ನಲಿಯುವ ಮಕ್ಕಳನ್ನು ಮುದ್ದಿಸುವ ನೆಪದಲ್ಲಿ ಮಾತನಾಡಿಸುತ್ತಿದ್ದ ಗಮನ ಬೇರೆಡೆ ಸೆಳೆದು ಅವರು ಧರಿಸುವ ಚಿನ್ನವನ್ನು ಆಗ ದೋಚುತ್ತಿದ್ದ. ಅಲ್ಲದೆ ವರ-ವಧುವಿನ ಕೋಣೆಗಳಿಗೆ ಸಹ ನುಸುಳಿ ಕೈಗೆ ಸಿಕ್ಕಿದ್ದ ನಗ-ನಾಣ್ಯವನ್ನು ಆತ ಕಳವು ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಅದೇ ರೀತಿ ಕಳೆದ ಫೆ.8 ರಂದು ಥಣಿಸಂದ್ರ ಮುಖ್ಯರಸ್ತೆಯ ಇಬಿಸಿ ಕಲ್ಯಾಣ ಮಂಪಟದಲ್ಲಿ ಏಳು ವರ್ಷದ ಬಾಲಕಿಯ ಗಮನ ಬೇರೆಡೆ ಸೆಳೆದು ನೆಕ್ಲೇಸ್ ಹಾಗೂ ಬಳೆಗಳು ಸೇರಿದಂತೆ 70 ಗ್ರಾಮ್ ಚಿನ್ನಾಭರಣವನ್ನು ಬಾಬು ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.