ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ದೇವರು ಹಾಗೂ ಗುರು ಇವರಿಬ್ಬರ ಅನುಗ್ರಹವನ್ನು ಯಾರೂ ಪಡೆಯುತ್ತಾರೋ ಅಂತಹವರು ಪುಣ್ಯಶಾಲಿಗಳೆಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.ತಾಲೂಕಿನ ಸುಕ್ಷೇತ್ರ ಉತ್ನಾಳ ಹಿರೇಮಠದ ಮಹಾಲಕ್ಷ್ಮೀ ದೇವಿ 33ನೇ ಜಾತ್ರಾಮಹೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪುರಾಣ ಮಹಾಮಂಗಲ, ಧರ್ಮಸಭೆ, ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉತ್ನಾಳ ಹಿರೇಮಠವು ಭಕ್ತರ ಮಠವಾಗಿದೆ. ಶ್ರೀಮಠದ ಪೂಜ್ಯರಾದ ಶಿವಪುತ್ರಯ್ಯ ಸ್ವಾಮೀಜಿಯವರ ಕೃಪೆಯಿಂದ ಎಲ್ಲ ಭಕ್ತರ ಕಷ್ಟ ದೂರವಾದ ಸಾಕಷ್ಟು ಉದಾಹರಣೆಗಳು ಕಣ್ಣು ಮುಂದಿವೆ. ಶ್ರೀಗಳು ಶುದ್ಧ ಮನಸ್ಸಿನ ಸಾಧು ಸ್ವಭಾವದವರು. ಎಲ್ಲರಿಗೂ ಸದಾ ಒಳ್ಳೆಯದನ್ನೆ ಬಯಸುವ ಸ್ವಭಾವ ಹೊಂದಿದ್ದಾರೆ. ಇವರು ಮಹಾಲಕ್ಷ್ಮೀ ಆರಾಧಕರಾಗಿ ಅನೇಕ ಜನರ ಬಾಳಿನಲ್ಲಿ ಕಲ್ಪವೃಕ್ಷರಾಗಿದ್ದಾರೆ. ಶ್ರೀಮಠದೊಂದಿಗೆ ನಮ್ಮದು ಹಲವು ವರ್ಷಗಳ ಬಾಂಧವ್ಯವಿದೆ. ಶ್ರೀಮಠದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಿದೆ. ನನ್ನ ಸಹಕಾರ ಸದಾ ಇದೆ ಎಂದರು.ಶ್ರೀಗಳು ಜಾತ್ರಾಮಹೋತ್ಸವ ನಿಮಿತ್ತ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವುದು ಶ್ಲಾಘನೀಯ. ಶ್ರೀಮಠವು ಶಿಕ್ಷಣ ಸಂಸ್ಥೆ ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಕೈಂಕರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಈ ಮಠವು ಆಧ್ಯಾತ್ಮಿಕ ಜಾಗೃತಿ ಉಂಟುಮಾಡುವ ಜತೆಗೆ ಜನರ ಆರೋಗ್ಯ ಸಂರಕ್ಷಣೆ, ಶೈಕ್ಷಣಿಕ ಕ್ಷೇತ್ರ, ಕೃಷಿ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನ ಸೇವೆ ನೀಡುತ್ತಿದೆ. ಸರ್ವರನ್ನು ಸಮಾನವಾಗಿ ಕಾಣುತ್ತದೆ. ನೂತನವಾಗಿ ನಿರ್ಮಿಸುತ್ತಿರುವ ಮಹಾಲಕ್ಷ್ಮೀ ದೇವಿ ದೇವಸ್ಥಾನಕ್ಕೆ ಎಲ್ಲರೂ ತನುಮನಧನದಿಂದ ಸಹಾಯ, ಸಹಕಾರ ನೀಡಬೇಕೆಂದರು.
ಎಲ್ಲ ಬಾಂಧವರು ಸಮನ್ವಯದೊಂದಿಗೆ ಸಾರ್ಥಕ ಜೀವನ ತಮ್ಮದಾಗಿಸಿಕೊಳ್ಳಬೇಕು. ಬಸವೇಶ್ವರ ಹೇಳಿದ ಸಪ್ತಸೂತ್ರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಯುರ್ವೇದ ಚಿಕಿತ್ಸೆ ಉತ್ತಮವಾಗಿದೆ ಎಂದರು.
ಪ್ರಶಾಂ ರಿಪ್ಪನಪೇಟೆ ಮಾತನಾಡಿದರು.ವೇದಿಕೆಯಲ್ಲಿ ಶ್ರೀಮಠದ ಶಿವಪುತ್ರಯ್ಯ ಸ್ವಾಮೀಜಿ, ಸಂತೆಕಲ್ಲೂರಿನ ಗುರುಬಸವ ಸ್ವಾಮೀಜಿ, ಶಹಾಪೂರಿನ ಸೂಗೂರೇಶ್ವರ ಸ್ವಾಮೀಜಿ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ ಕಟ್ಟಿ, ಕನ್ನಡಪ್ರಭ ವರದಿಗಾರ ಬಸವರಾಜ ನಂದಿಹಾಳ, ಷಣ್ಮುಖಪ್ಪ ಅಂಬಲಿ ಅವರಿಗೆ ಶ್ರೀಗುರು ಸೇವಾ ರತ್ನ 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.ನೀಲಕಂಠರಾವ ನಾಡಗೌಡ, ಮಲ್ಲಯ್ಯ ಹಿರೇಮಠ, ವೀರಣ್ಣ ಮರ್ತುರ, ರೇವಣಸಿದ್ದಪ್ಪ ಅಳ್ಳಗಿ, ಯಮನಪ್ಪ ಮನಗೂಳಿ, ಶಾಂತಪ್ಪ ಕವಲಗಿ, ವೆಂಕನಗೌಡ ಮೂಲಿಮನಿ, ಬಸಪ್ಪ ಸಜ್ಜನ ಇತರರಿಗೆ ಆದರ್ಶ ದಂಪತಿಗಳೆಂದು ಗೌರವಿಸಲಾಯಿತು.
ಎಸ್.ಎಂ.ಸಜ್ಜನ ಸ್ವಾಗತಿಸಿದರು. ಸಂಗಮೇಶ ಹಿರೇಮಠ, ಮನಗೂಳಿ ನಿರೂಪಿಸಿದರು. ಅಪಾರ ಸಂಖ್ಯೆಯ ಮುತ್ತೈದೆಯರಿಗೆ ಶ್ರೀಮಠದಿಂದ ಉಡಿ ತುಂಬಲಾಯಿತು.31 ನೇ ಮುದ್ರಣದ ಭಗವಚ್ಚಿಕಿತ್ಸೆಯ ರಹಸ್ಯ ಪುಸ್ತಕ ಶ್ರೀಗಳು ಬಿಡುಗಡೆ ಗೊಳಿಸಿದರು.