ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆಯ ಕೆನರಾ ಬ್ಯಾಂಕ್ ಬಳಿ ಇರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ೨೦ಲೀಟರ್ ನೀರು ಪಡೆಯಬೇಕಾದರೆ ಹೆಚ್ಚು ಕಡಿಮೆ ₹ ೧೦ ರಿಂದ ₹ ೧೨ಕಾಯಿನ್ ಹಾಕಬೇಕಾದ ಪರಿಸ್ಥಿತಿ ಎದುರಾಗಿದ್ದು, ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿಗಳಲ್ಲಿ ಕಮಿಷನ್ ವ್ಯಾಪಾರ: ಕೆಲ ಅಂಗಡಿಗಳಲ್ಲಿ ₹ ೧೦ಗೆ ೮ ಕಾಯಿನ್ ನೀಡುತ್ತಾರೆ. ಇದರಿಂದ ಕಾಯಿನ್ ಪಡೆಯಲು ಕೂಡ ಕಮಿಷನ್ ನೀಡಬೇಕಾಗಿದ್ದು, ಆ ೮ ಕಾಯಿನ್ ಹಾಕಿದರೂ ಸಹ ೨೦ ಲೀಟರ್ ಕ್ಯಾನ್ ತುಂಬುವುದಿಲ್ಲ. ಇದರಿಂದ ತೀವ್ರ ರೋಷಿ ಹೋಗಿರುವ ಜನ ಪಪಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದ ಮಧ್ಯ ಭಾಗದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ಇದಾಗಿದ್ದು, ಸುತ್ತಮುತ್ತ ಪ್ರದೇಶದ ಬಹುತೇಕ ಜನರು ಇಲ್ಲಿಯೇ ಬರುತ್ತಾರೆ. ಆದರೆ ನೀರು ಕಡಿಮೆ ಬರುವುದರಿಂದ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ನೀರು ತುಂಬಿಕೊಳ್ಳಬೇಕು. ಅಲ್ಲದೇ ಬಹುತೇಕ ಜನ ಕಾದು ಕಾದು ಸುಸ್ತಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಬೇರೆ ಕಡೆಗೆ ಹೋಗುತ್ತಾರೆ.ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸಿಗಲಿ ಎಂದು ಸರ್ಕಾರದಿಂದ ಲಕ್ಷಾಂತರ ವೆಚ್ಚ ಮಾಡಿ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಶುದ್ದ ನೀರಿಗೆ ನಿರ್ದಿಷ್ಟ ದರ ನಿಗದಿ ಮಾಡಲಾಗುತ್ತದೆ.ಇದರಿಂದ ಆದಾಯ ಕೂಡ ಬರುತ್ತದೆ. ಆದಾಯ ಪಡೆಯುವ ಪಪಂ ನಿರ್ವಹಣೆ ಮಾತ್ರ ಸಮರ್ಪಕವಾಗಿ ಮಾಡುವುದಿಲ್ಲ ಎಂಬುವುದು ಪ್ರಜ್ಞಾವಂತ ನಾಗರಿಕರ ಅಂಬೋಣ
ಈ ಬಗ್ಗೆ ಪರಿಶೀಲಿಸಿ ಘಟಕದ ನಿರ್ವಹಣಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಶೀಘ್ರವಾಗಿ ದುರಸ್ಥಿಗೊಳಿಸಲಾಗುವುದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಹೇಳಿದ್ದಾರೆ.