ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಬದಲು ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ನಿರ್ಮಾಣ ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಿವಮೊಗ್ಗ: ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಬದಲು ವಿಬಿ-ಜಿ ರಾಮ್ ಜಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ವಿರುದ್ಧ ರಾಜ್ಯ ಸರ್ಕಾರ ವಿನಾಕಾರಣ ಗೊಂದಲ ನಿರ್ಮಾಣ ಮಾಡುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗ್ರಾಮದ ಮೂಲಭೂತ ಸೌಕರ್ಯ ಮತ್ತು ಜೀವನ ಸುಧಾರಣೆಯ ಮಹತ್ವಾಕಾಂಕ್ಷೆಯನ್ನು ಹೊಂದಿ ಗ್ರಾಮಗಳ ಸಂಪೂರ್ಣ ಅಭಿವೃದ್ಧಿಯ ಅಭಿಯಾನದ ಉದ್ದೇಶವನ್ನು ಈ ವಿಬಿ-ಜಿ ರಾಮ್ ಜಿ ಯೋಜನೆ ಹೊಂದಿದೆ. ನರೇಗಾ ಕೇವಲ ಹರಟೆ ಹೊಡೆಯುವ ಕಟ್ಟೆಯಾಗಿತ್ತು. ಕಾಮಗಾರಿ ಆಯ್ತು ಎಂದು ಬಿಲ್ ಮಾಡಿದ್ದೇ ಸಾಧನೆಯಾಗಿದೆಯೇ ಹೊರತು ಗ್ರಾಮ ಬದಲಾಗಲಿಲ್ಲ. ಈ ಹಿಂದೆ ಶ್ರೀಮತಿ ಇಂದಿರಾಗಾಂಧಿಯವರು ಗರಿಬೀ ಹಠಾವೋ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರೂ ಇನ್ನೂ ತನಕ ಯಾವುದೇ ಪ್ರಯೋಜನವಾಗಲಿಲ್ಲ. ನರೇಗಾ ಯೋಜನೆ ಕೇವಲ ಕೂಲಿ ನೀಡುತ್ತಿದ್ದುದ್ದಕ್ಕೆ ಸೀಮಿತವಾಗಿದ್ದು, ಅದರಿಂದ ಬಡವರಿಗೆ, ಕೂಲಿಕಾರರಿಗೆ ಏನೂ ಪ್ರಯೋಜನವಾಗಲಿಲ್ಲ ಎಂದು ಟೀಕಿಸಿದರು.ದೇಶ ವೇಗವಾಗಿ ಮುಂದುವರಿಯುತ್ತಿದೆ. ವಿಕಸಿತ ಭಾರತದ ದೂರದೃಷ್ಟಿಯಿಂದ ರಾಮ್-ಜೀ ಯೋಜನೆ ಜಾರಿಗೆ ಬಂದಿದೆ. ದಾರಿದ್ರ್ಯದಿಂದ ಸ್ವಾವಲಂಬನೆ ಕಡೆ ಹೋಗಬೇಕೆನ್ನುವ ಉದ್ದೇಶ ಇದರಲ್ಲಿದೆ. ಕಾರ್ಮಿಕರು ಕೌಶಲ್ಯದಿಂದ ಕೆಲಸ ಮಾಡುವ ಉದ್ದೇಶ ರಾಮ್-ಜೀ ಯೋಜನೆಯಲ್ಲಿದೆ. ಕೂಲಿಯಿಂದ ಮೌಲ್ಯ ವೃದ್ಧಿಸುವ ಹಾಗೂ ಉದ್ಯೋಗ ಸೃಷ್ಟಿಗೆ ಶಕ್ತಿಕೊಡುವ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದರ ಬಗ್ಗೆ ಗಮನಿಸಬೇಕು. ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಸಲಹೆ ನೀಡಿದರು.ಈ ಹಿಂದೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಮತ್ತು ರಾಜ್ಯದ ಪ್ರಮಾಣ ಕ್ರಮವಾಗಿ 60:40 ಇರಬೇಕು ಎಂದಾಗ, ಕಾಂಗ್ರೆಸ್‌ನವರು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದ ಅವರು, ನರೇಗದಲ್ಲಿದ್ದ ಕೂಲಿ ದಿನವನ್ನು 100 ರಿಂದ 125 ದಿನಗಳಿಗೆ ಈಗ ಹೆಚ್ಚಿಸಿದ್ದಲ್ಲದೆ ಅದಕ್ಕೆ ನೀಡುವ ಕೂಲ ಹಣದ ಮೊತ್ತವನ್ನು ಬಿಜೆಪಿ ಸರ್ಕಾರ ಹೆಚ್ಚಿಸಿದೆ. ಅಲ್ಲದೆ ವಿಬಿ-ಜಿ ರಾಮ್ ಜಿ ಯೋಜನೆಯನ್ನು ವಿವಿಧ ಸೇವೆಗಳಿಗೆ ವಿಸ್ತರಣೆ ಮಾಡಲಾಗಿದೆ. ಕಾಂಗ್ರೆಸ್ ಇದರಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಇದು ಕಾಂಗ್ರೆಸ್ ಅಧೋಗತಿಗೆ ಕಾರಣವಾಗಲಿದೆ ಎಂದು ಭವಿಷ್ಯ ನುಡಿದರು.ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 100ನೇ ವರ್ಷ ಪೂರೈಸುವ 2047 ಅನ್ನು ಗಮನದಲ್ಲಿಟ್ಟು ನರೇಗಾಕ್ಕೆ ಮೊದಲಿದ್ದ 33 ಸಾವಿರ ಕೋಟಿ ರುಪಾಯಿ ಅನುದಾನದ ಬದಲಿಗೆ, ಈಗ ಕೇಂದ್ರದ ಎನ್‌ಡಿಎ ಸರ್ಕಾರ 2 ಲಕ್ಷ ಕೋಟಿ ರು. ಮಿಕ್ಕಿ ಬಜೆಟ್‌ನಲ್ಲಿ ಹಣ ಮೀಸಲಿರಿಸಿದೆ. ಇದನ್ನು ಕಾಂಗ್ರೆಸ್ ಮುಖಂಡರು ಗಮನಿಸಬೇಕು. ಯಾವ ಶ್ರೀರಾಮನ ಆದರ್ಶವನ್ನು ಮಹಾತ್ಮಗಾಂಧೀಜಿಯವರ ಆರಾಧಿಸುತ್ತಿದ್ದರು ಆ ರಾಮನ ಹೆಸರೇ ನರೇಗಾ ಯೋಜನೆಗೆ ಇಟ್ಟಿದ್ದನ್ನು ಕಾಂಗ್ರೆಸ್‌ನವರು ಏಕೆ ವಿರೋಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಗಾಂಧೀಜಿ ಬಿಟ್ಟು ಈ ದೇಶ ಇಲ್ಲ, ಶ್ರೀರಾಮ ಆದರ್ಶ ಬಿಟ್ಟು ಜನರಿಲ್ಲ. ಗಾಂಧೀಜಿಯ ಹೆಸರು ಹೇಳಿದರೆ ಕಾಂಗ್ರೆಸ್‌ನವರು ಜೈಕಾರ ಹಾಕುತ್ತಾರೆ. ಶ್ರೀರಾಮನ ಹೆಸರು ಹೇಳಿದರೆ ಧಿಕ್ಕಾರ ಹಾಕುತ್ತಾರೆ. ಅದು ಇನ್ನು ನಡೆಯುವುದಿಲ್ಲ. ಈಗ ರಾಮನ ಹೆಸರು ಹೇಳುತ್ತೇವೆ. ಮುಂದೆ ಕೃಷ್ಣನ ಹೆಸರು ಹೇಳುತ್ತೇವೆ ಎಂದು ಚಾಟಿ ಬೀಸಿದರು.ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಮೋಹನ್‌ರೆಡ್ಡಿ, ಪ್ರಮುಖರಾದ ದೀನ್‌ದಯಾಳ್, ಮಂಜುನಾಥ್ ನವುಲೆ, ಚಂದ್ರಶೇಖರ್, ಶರತ್ ಕಲ್ಯಾಣಿ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.