ಗಣೇಶೋತ್ಸವಕ್ಕೆ ಅನಗತ್ಯ ನಿರ್ಬಂಧ: ಇನ್‌ಸ್ಪೆಕ್ಟರ್ ಅಮಾನತಿಗೆ ಸಿ.ಸಿ. ಪಾಟೀಲ ಆಗ್ರಹ

KannadaprabhaNewsNetwork |  
Published : Sep 16, 2026, 02:15 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ನರಗುಂದ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಗಣೇಶೋತ್ಸವ ಸೇರಿ ಹಿಂದೂ ಹಬ್ಬಗಳ ಆಚರಣೆಗೆ ಅನಗತ್ಯ ನಿರ್ಬಂಧ ಹೇರುವುದು, ಧ್ವನಿವರ್ಧಕ, ಪಟಾಕಿ ಹಾಗೂ ಮೆರವಣಿಗೆ ವಿಚಾರದಲ್ಲಿ ಪೊಲೀಸರು ತಾರತಮ್ಯ ಎಸಗುತ್ತಿರುವುದು ಸರಿಯಲ್ಲ.

ಹಿಂದೂಗಳನ್ನು ಬೈದರೆ ಪ್ರೊಮೋಷನ್ ಸಿಗುತ್ತದೆ ಎಂಬ ಭ್ರಮೆ ಇರಬಹುದು

ಮುಖ್ಯಮಂತ್ರಿ, ಗೃಹ ಸಚಿವರ ಬೆಂಬಲ ಆಕ್ಷೇಪಾರ್ಹ

ಕನ್ನಡಪ್ರಭ ವಾರ್ತೆ ಗದಗ

ಗಣೇಶೋತ್ಸವ ಸೇರಿ ಹಿಂದೂ ಹಬ್ಬಗಳ ಆಚರಣೆಗೆ ಅನಗತ್ಯ ನಿರ್ಬಂಧ ಹೇರುವುದು, ಧ್ವನಿವರ್ಧಕ, ಪಟಾಕಿ ಹಾಗೂ ಮೆರವಣಿಗೆ ವಿಚಾರದಲ್ಲಿ ಪೊಲೀಸರು ತಾರತಮ್ಯ ಎಸಗುತ್ತಿರುವುದು ಸರಿಯಲ್ಲ. ಹಿಂದೂ ಕಾರ್ಯಕರ್ತರಿಗೆ ಧಮ್ಕಿ ಹಾಕಿರುವ ಟಿ. ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್‌ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಿ. ನರಸೀಪುರದಲ್ಲಿ ಇದುವರೆಗೂ ಯಾವುದೇ ಕೋಮುಗಲಭೆ ನಡೆದಿರಲಿಲ್ಲ. ಆದರೆ ಇನ್‌ಸ್ಪೆಕ್ಟರ್ ಧನಂಜಯ್ ವರ್ತನೆಯಿಂದಾಗಿ ಹಿಂದೂ-ಮುಸ್ಲಿಂ ನಡುವೆ ಬಿರುಕು ಮೂಡಿದೆ. ಸಮಾಜ ಘಾತುಕ ಶಕ್ತಿಗಳು ಹಾಗೂ ದರೋಡೆಕೋರರ ಗ್ರಹಚಾರ ಬಿಡಿಸಲು ಸರ್ಕಾರ ಸಮವಸ್ತ್ರ ನೀಡಿದೆಯೇ ಹೊರತು, ಹಿಂದೂಗಳ ಗ್ರಹಚಾರ ಬಿಡಿಸುವುದಕ್ಕಲ್ಲ. ಹಿಂದೂಗಳನ್ನು ಬೈದರೆ ಗೃಹ ಸಚಿವರು ಸಿಪಿಐನಿಂದ ಎಸ್‌ಪಿಯಾಗಿ ಪ್ರಮೋಷನ್ ಕೊಡುತ್ತಾರೆ ಎಂಬ ಭ್ರಮೆಯಲ್ಲಿದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರಮ ಕೈಗೊಳ್ಳುವುದನ್ನು ತಡೆದು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ಬೆಂಬಲಿಸುತ್ತಿರುವುದು ಆಕ್ಷೇಪಾರ್ಹ. ಗೃಹ ಸಚಿವರ ಕ್ಷೇತ್ರದಲ್ಲೇ ಅಲ್ಪಸಂಖ್ಯಾತರ ಹಬ್ಬಗಳಿಗೆ ಯಾವುದೇ ಅಡ್ಡಿಯಿಲ್ಲದೆ ಡಿಜೆಗಳೊಂದಿಗೆ ಅನುಮತಿ ಸಿಗುತ್ತದೆ. ಆದರೆ ಗಣೇಶೋತ್ಸವ ಬಂದಾಗ ಮಾತ್ರ ನೂರೆಂಟು ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂದು ಹರಿಹಾಯ್ದರು.

ಮೋದಿ ಸೇವಾ ಮಾಸಾಚರಣೆ:

ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಅಂಗವಾಗಿ ಸೆ. 17ರಿಂದ ಅ. 17ರ ವರೆಗೆ ಬಿಜೆಪಿಯಿಂದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಸ್ವಚ್ಛತಾ ಅಭಿಯಾನ ಸೇರಿದಂತೆ 25 ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ. 17ರಂದು ಮನೆಗಳಲ್ಲಿ ದೀಪ ಬೆಳಗಿಸಿ ಮೋದಿಯವರ ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲಾಗುವುದು ಎಂದರು.

ಬರ ಘೋಷಣೆ ನಿರೀಕ್ಷೆ:

ಜಿಲ್ಲೆಯ ಎಲ್ಲ 7 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ವಿಚಾರದಲ್ಲಿ ಆಶಾಭಾವನೆ ಇದೆ. ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾದ ಬಳಿಕ ಸೆ. 23ರಂದು ಸರ್ಕಾರದಿಂದ ಬರ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ಶೂ ವಿತರಿಸುವುದು ಶಿಕ್ಷಣ ಇಲಾಖೆಯ ಜವಾಬ್ದಾರಿಯೇ ಹೊರತು ಶಾಸಕರದ್ದಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಪ ಸದಸ್ಯ ಎಸ್.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಎಂ.ಎಸ್. ಕರಿಗೌಡ್ರ, ಎಂ.ಎಂ. ಹಿರೇಮಠ, ಶ್ರೀಪತಿ ಉಡುಪಿ, ನಿರ್ಮಲಾ ಕೊಳ್ಳಿ, ಉಷಾ ದಾಸರ, ಲಿಂಗರಾಜ ಪಾಟೀಲ, ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ಪ್ರಕಾಶ ಅಂಗಡಿ, ಮುಖಂಡರಾದ ಪ್ರಶಾಂತ ನಾಯ್ಕರ, ಮಹೇಶ ದಾಸರ ಮತ್ತಿತರರು ಉಪಸ್ಥಿತರಿದ್ದರು.ಆಕ್ರೋಶ:

ಒಂದೇ ಮಾತರಂ ಗೀತೆಯನ್ನು ಪೂರ್ಣ ಹಾಡದೇ ಇರುವ ಕುರಿತಂತೆ ಮಾತನಾಡಿದ ಸಿ.ಸಿ. ಪಾಟೀಲ, ಒಂದೇ ಮಾತರಂ ಹಾಡಬೇಕು ಎನ್ನುವುದು ನಿಯಮ. ಅದರಲ್ಲಿ ಇದನ್ನು ಹಾಡುವುದಿಲ್ಲ, ಆ ಪ್ಯಾರಾ ಹಾಡುವುದಿಲ್ಲ ಎನ್ನಲು ಅದರಲ್ಲಿ ಅಂತಹದ್ದು ಏನಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ, ಇಲ್ಲವೇ ಇಟಲಿಯ ರಾಷ್ಟ್ರಗೀತೆಯನ್ನಾದರೂ ಹಾಡಲಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

------

15ಜಿಡಿಜಿ4

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಪಂಚಾಯತ್ ಮಹಿಳಾ ಕಬಡ್ಡಿ ತಂಡಕ್ಕೆ ದ್ವಿತೀಯ ಸ್ಥಾನ
ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ