ಕನ್ನಡಪ್ರಭ ವಾರ್ತೆ ತಾಳಿಕೋಟೆ
ಅಧ್ಯಕ್ಷ ಸ್ಥಾನಕ್ಕೆ ಜುಬೇದಾ ಒಬ್ಬರೇ ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಗೌರಮ್ಮ ಕುಂಬಾರ ಹಾಗೂ ಶಾಂತಾಬಾಯಿ ನಿಂಗಪ್ಪ ಹೊಟ್ಟಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಪರಿಶೀಲನೆ ನಂತರ ಶಾಂತಾಬಾಯಿ ಹೊಟ್ಟಿ ನಾಮಪತ್ರ ಹಿಂದಕ್ಕೆ ಪಡೆದಿದ್ದರಿಂದ ಅಧ್ಯಕ್ಷರಾಗಿ ಜಮಾದಾರ, ಉಪಾಧ್ಯಕ್ಷರಾಗಿ ಗೌರಮ್ಮ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್ ಕೀರ್ತಿ ಚಾಲಕ್ ಘೋಷಿಸಿದರು.
ಈ ವೇಳೆ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಮಾತನಾಡಿ, ಚುನಾವಣೆ ಬಂದಾಗ ಮಾತ್ರ ರಾಜಕಾರಣವಿರಲಿ. ಚುನಾವಣೆ ನಂತರ ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಸುಗಮ ಆಡಳಿತ ನಡೆಸಿಕೊಂಡು ಹೋಗಬೇಕು. ಪುರಸಭೆ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಒಳಗೊಂಡು ಆಡಳಿತ ಮಂಡಳಿ ಎಲ್ಲ ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸುತ್ತೇನೆಂದ ಅವರು, ಪಟ್ಟಣದ ಸೌಂದರ್ಯೀಕರಣದ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡು ಉತ್ತಮ ಆಡಳಿತ ನೀಡಬೇಕೆಂದರು.ನೂತನ ಅಧ್ಯಕ್ಷ-ಉಪಾಧ್ಯಕ್ಷರಗೆ ಶಾಸಕ ಸಿ.ಎಸ್.ನಾಡಗೌಡ, ಪುರಸಭೆ ಹಾಗೂ ಸಾರ್ವಜನಿಕರಿಂದ ಗೌರವಿಸಲಾಯಿತು. ಚುನಾವಣಾ ಸಹಾಯಕರಾಗಿ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ತಹಸೀಲ್ದಾರ್ ಕಾರ್ಯಾಲಯದ ಬಾಬಾನಗರ, ವಿರೇಶ ಅಲ್ಲದೇ ಪುರಸಭೆ ಸಿಬ್ಬಂದಿ ಕಾರ್ಯನಿರ್ವಹಿಸಿದರು.
ವಿಜಯೋತ್ಸವ:
ಪಟ್ಟಣದ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ತಮ್ಮ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರಲ್ಲದೇ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜೈಕಾರ ಹಾಕುತ್ತಾ ತೆರಳಿದರು.----
ಕೋಟ್...ಚುನಾವಣೆಗಳಲ್ಲಿ ಸೋಲು ಗೆಲವು ಸಹಜ ಆದರೆ ಚುನಾವಣೆ ನಂತರ ಎಲ್ಲ ಸದಸ್ಯರ ಸಹಕಾರ ತೆಗೆದುಕೊಳ್ಳುವುದರೊಂದಿಗೆ ಪಟ್ಟಣದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಸಿ.ಎಸ್.ನಾಡಗೌಡರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತೇನೆ. ಅಲ್ಪ ಅವಧಿಯಲ್ಲಿಯೇ ಸಾಕಷ್ಟು ಅಭಿವೃದ್ಧಿ ಸವಾಲುಗಳಿದ್ದು ಅವುಗಳನ್ನು ಎದುರಿಸಿ ತಾಳಿಕೋಟೆ ಪಟ್ಟಣ ಮಾದರಿ ನಗರವನ್ನಾಗಿ ಮಾಡುವುದು ನನ್ನ ಗುರಿ ಇದೆ.
- ಜುಬೇದಾ ಜಮಾದಾರ, ಪುರಸಭೆ ನೂತನ ಅಧ್ಯಕ್ಷೆ