ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಅಗತ್ಯ

KannadaprabhaNewsNetwork | Published : Jan 23, 2025 12:48 AM

ಸಾರಾಂಶ

ಕರ್ನಾಟಕ ಶ್ರಮಿಕ ಶಕ್ತಿ, ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಶ್ರಮಿಕ ಶಕ್ತಿ ಪ್ರಧಾನ ಸಂಚಾಲಕ ವರದರಾಜ್ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಹುಸಂಖ್ಯೆಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರೆತೆ ಇಲ್ಲದಿರುವುದರಿಂದ ರಾಜ್ಯಾದ್ಯಂತ ಸಂಚರಿಸಿ ಸಂಘಟಿಸಲಾಗುತ್ತಿದೆ. ಅಸಂಘಟಿತರಿಗೆ ಜೀವನ ಭದ್ರತೆ ಒದಗಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಶ್ರಮಿಕ ಶಕ್ತಿ ಪ್ರಧಾನ ಸಂಚಾಲಕ ವರದರಾಜ್ ಹೇಳಿದರು.

ಕರ್ನಾಟಕ ಶ್ರಮಿಕ ಶಕ್ತಿ, ಜನಶಕ್ತಿ ಹಾಗೂ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಮಂಗಳವಾರ ಶ್ರಮಿಕ ಶಕ್ತಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶೋಷಣೆಗೆ ಒಳಗಾಗಿರುವ ಅಸಂಘಟಿತ ಕಾರ್ಮಿಕರಿಗೆ ಕೆಲಸ, ವೇತನ ಭದ್ರತೆಯಿಲ್ಲ. ಟೈಲರ್ಸ್ ಮತ್ತು ಬೀದಿಬದಿ ವ್ಯಾಪಾರಿಗಳ ಬದುಕು ಸಂಕಷ್ಟದಲ್ಲಿ ಇದೆ. ಆದ್ದರಿಂದ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಸಿದರು.

ಜಿಲ್ಲಾ ಅಲೆಮಾರಿ ಮತ್ತು ಅರೆಅಲೆಮಾರಿಗಳ ಸಂಘದ ಅಧ್ಯಕ್ಷ ಎಸ್.ಲಕ್ಷ್ಮೀಕಾಂತ್ ಮಾತನಾಡಿ, ವಿದ್ಯಾವಂತರು ಜಾಸ್ತಿಯಾಗುತ್ತಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಆಗುತ್ತಿದ್ದಾರೆ. ಬಂಡವಾಳಶಾಹಿಗಳು ನಿರುದ್ಯೋಗಿಗಳಿಂದ ದುಡಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ಅಸಂಘಟಿತ ಕಾರ್ಮಿಕರು ಸಂಘಟನೆ ಆಗಬೇಕಿದೆ. ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ 15-20 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಐದು ಸಾವಿರ ಅತಿಥಿ ಉಪನ್ಯಾಸಕರನ್ನು ಹೊರಹಾಕಲಾಗಿದೆ. ಮಾನವೀಯತೆ ದೃಷ್ಟಿಯಿಂದ ಇವರ ಸೇವೆ ಕಾಯಂಗೊಳಿಸಿ ಜೀವನ ಭದ್ರತೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಟೈಲರ್ ಸಂಘದ ಅಧ್ಯಕ್ಷ ಟಿ.ಶಫಿವುಲ್ಲಾ ಮಾತನಾಡಿ, ಚಿತ್ರದುರ್ಗದಲ್ಲಿ ಬಹುತೇಕ ಅಸಂಘಟಿತ ಕಾರ್ಮಿಕರಿದ್ದಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದರು. ಕರ್ನಾಟಕ ಶ್ರಮಿಕ ಶಕ್ತಿ ಕಾರ್ಯದರ್ಶಿ ಸತೀಶ್, ಬೆಂಗಳೂರು ವಲಯ ಸಂಚಾಲಕ ರವಿ, ಜಪಾನ್ ಶ್ರೀನಿವಾಸ್ ಇನ್ನು ಅನೇಕರು ಸಭೆಯಲ್ಲಿ ಹಾಜರಿದ್ದರು.

Share this article