ಶಿವಾನಂದ ಅಂಗಡಿ
ತಾರಿಹಾಳ ಕೈಗಾರಿಕೆ ವಸಾಹುತು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ತಾಪ್ತಿಯಲ್ಲಿದ್ದು, 312 ಎಕರೆ ಪ್ರದೇಶದಲ್ಲಿ ಹರಡಿದೆ. ಹುಬ್ಬಳ್ಳಿಯ ಮಹಾನಗರದಿಂದ 10 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿ 160ಕ್ಕೂ ಹೆಚ್ಚು ಕೈಗಾರಿಕೆಗಳು ದೇಶದ ಉತ್ಪಾದನೆಗೆ ಕೊಡುಗೆ ನೀಡಿವೆ. ಆದರೆ, ಎಲ್ಲೆಡೆ ಇರುವಂತೆ ಇಲ್ಲಿಯೂ ಸಮಸ್ಯೆಗಳು ಉದ್ದಿಮೆದಾರರನ್ನು ಕಾಡುತ್ತಿದ್ದು, ಸಂಕಷ್ಟಕ್ಕೆ ದೂಡಿವೆ.
ಕೈಗಾರಿಕೆ ಪ್ರದೇಶಕ್ಕೆ ಮೂಲಭೂತವಾಗಿ ನೀರು ಬೇಕು, ಆದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಪರೀತವಾಗಿದೆ. ಕಾರ್ಮಿಕರಿಗೂ ಸಹ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಮಲಪ್ರಭಾ ನದಿಯಿಂದ ನೀರು ತರಲು ತಾರಿಹಾಳ ಮತ್ತು ಗಾಮನಗಟ್ಟಿ ಪ್ರದೇಶದಲ್ಲಿ ಎಲ್‌ಎನ್‌ಟಿ ಕಂಪನಿಯವರು ಪೈಪ್‌ಲೈನ್ ಹಾಕಿದ್ದಾರೆ. ಆದರೆ ವರ್ಷದಿಂದ ಅದು ನನೆಗುದಿಗೆ ಬಿದ್ದಿದೆ. ಕಣಿವೆ ಹೊನ್ನಾಪುರದಿಂದ ನೀರು ತರಲು ಯೋಜನೆ ರೂಪಿಸಲಾಗಿದೆ.ದಾರಿ ವಿದ್ಯುತ್ ದೀಪಗಳೇ ಇಲ್ಲಿ ಹತ್ತುತ್ತಿಲ್ಲ. ನಿರ್ವಹಣೆ ತೀವ್ರ ತೊಂದರೆಯಾಗಿದೆ. ರಸ್ತೆ ಮಾಡುವಾಗ ಕಂಬಗಳನ್ನು ಕೆಡವಿದ್ದು ಹೊತ್ತು ಮುಳಗುತ್ತಲೇ ರಸ್ತೆಗಳಲ್ಲೇ ಕತ್ತಲು ಆವರಿಸುತ್ತದೆ.
ಇಲ್ಲಿಯ ಉದ್ದಿಮೆದಾರರ ಹಿತರಕ್ಷಣೆಗಾಗಿಯೇ ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರೀಯಲ್ ಅಸೋಸಿಯೇಶನ್, ತಾರಿಹಾಳ ಹೆಸರಿನಲ್ಲಿ ಸಂಘ ಹುಟ್ಟಿಕೊಂಡಿದ್ದು, 140 ಸದಸ್ಯರ ನೋಂದಣಿಯಾಗಿದೆ. ಗೃಹ ಬಳಕೆಯ ಪಿಠೋಪಕರಣ ಸೇರಿದಂತೆ ರೊಟ್ಟಿ, ಹಪ್ಪಳ, ಸಂಡಿಗೆ ತಯಾರಿಕೆ ಯಂತ್ರಗಳು, ನಟ್ಟು, ಬೊಲ್ಟು ಹೀಗೆ ಇಂಥ ಹಲವಾರು ವಸ್ತುಗಳು ವಿದೇಶಕ್ಕೆ ರಫ್ತಾಗುತ್ತವೆ.
ಸೇತುವೆ ದುರಸ್ತಿ: ತಾರಿಹಾಳದಿಂದ ಗಾಮನಗಟ್ಟಿ ಕೈಗಾರಿಕೆ ಪ್ರದೇಶಕ್ಕೆ ತೆರಳಲು ರಸ್ತೆಯಲ್ಲಿ ಅಡ್ಡವಾಗಿ ಹೆದ್ದಾರಿಗೆ ಸೇತುವೆ ನಿರ್ಮಿಸುತ್ತಿದ್ದು, ಸೇತುವೆ ಕೆಳಗಿನ ರಸ್ತೆ ಬಂದ್ ಆಗಿದೆ. ಹೀಗಾಗಿ ಬೈಪಾಸ್ ಮೇಲೆ ಹಾದು ಕಚ್ಚಾ ರಸ್ತೆಯಲ್ಲಿ ಸಾಗಬೇಕು, ಹೀಗೆ ಸಾಗುವಾಗ ಹೆದ್ದಾರಿ ರಸ್ತೆ ಏರಲು ಸರಿಯಾಗಿ ರಸ್ತೆ ಸಹ ಮಾಡಿಲ್ಲ. ಹೀಗಾಗಿ ದಿನಕ್ಕೆ ಸಾವಿವಾರು ವಾಹನಗಳು ಸಂಚರಿಸುವ ಪ್ರದೇಶದಲ್ಲಿ ಧೂಳು ವಿಪರೀತವಾಗಿದ್ದು, ನಿತ್ಯ ಸಂಚರಿಸುವವರು ಧೂಳು ಮೆತ್ತಿಕೊಂಡೇ ತಮ್ಮ ಕೈಗಾರಿಕೆಗಳಿಗೆ ತೆರಳಬೇಕಾಗಿದೆ.
ಮಾಹಿತಿ ಸಿಗುವುದಿಲ್ಲ: ಕೈಗಾರಿಕೆ ಕೆಲಸದ ನಿಮಿತ್ತ ಇಲ್ಲಿಗೆ ಭೇಟಿ ಕೊಟ್ಟವರಿಗೆ ಯಾವ ಕೈಗಾರಿಕೆ ಎಲ್ಲಿದೆ ಎಂಬುದು ಸರಿಯಾದ ಮಾಹಿತಿಯೇ ಇಲ್ಲಿ ಸಿಗುವುದಿಲ್ಲ. ತಾರಿಹಾಳ ಕೈಗಾರಿಕಾ ಪ್ರದೇಶದ ಪ್ರವೇಶದಲ್ಲೇ ನಾಲ್ಕು ರಸ್ತೆಗಳು ಸೇರುತ್ತವೆ. ಇಂಥ ಸ್ಥಳದಲ್ಲಿ ಯಾವ ಕೈಗಾರಿಕೆ ಯಾವ ರಸ್ತೆಯಲ್ಲಿದೆ ಎಂಬ ಫಲಕ ಹಾಕಿದ್ದರೆ ಹೊರಗಿನಿಂದ ಬಂದವರಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಗ್ರಾಹಕರು. ಪ್ಲಾಟ್ ನಂಬರ್ ಸೇರಿ ಕೈಗಾರಿಕೆಯ ನಾಮಫಲಕ ಹಾಕಬೇಕಾಗಿತ್ತು ಎಂಬುದು ಬಹುಜನರ ಅಪೇಕ್ಷೆಯಾಗಿದೆ.
ಸರ್ಕಾರ ಕೈಗಾರಿಕೆ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು, ಇದರಿಂದ ಉತ್ಪಾದನೆ ಹೆಚ್ಚಾಗಿ ಹೊರಗಿನ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಈ ಸಂಬಂಧ ನಾವು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ ಎಂದು ತಾರಿಹಾಳದ ಗ್ರೇಟರ್ ಹುಬ್ಬಳ್ಳಿ-ಧಾರವಾಡ ಇಂಡಸ್ಟ್ರೀಯಲ್ ಅಸೋಸಿಯೇಶನ್ ಅಧ್ಯಕ್ಷ ವಿಜಯ ಭಾರತಿ ಹೇಳಿದರು.