ಹೊಳಲ್ಕೆರೆ ಬಂದ್ ಗೆ ಅಭೂತಪೂರ್ವ ಬೆಂಬಲ

KannadaprabhaNewsNetwork | Updated : Mar 05 2024, 01:34 AM IST

ಸಾರಾಂಶ

ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ರೈತ ಸಂಘ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸೇರಿ ವಿವಿಧ ಜನಪರ ಸಂಘಟನೆಗಳು ಕರೆ ನೀಡಿದ್ದ ಹೊಳಲ್ಕೆರೆ ಬಂದ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಹೊಳಲ್ಕೆರೆ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ಸುಗಳ ಸಂಚಾರವಿರಲಿಲ್ಲ. ಶಿವಮೊಗ್ಗ, ಬಳ್ಳಾರಿ, ಮಂಗಳೂರು, ದಾವಣಗೆರೆ, ಚಿಕ್ಕಮಗಳೂರು ಕಡೆ ಹೋಗುವ ಪ್ರಯಾಣಿಕರು ಪರದಾಡಬೇಕಾಯಿತು. ವಕೀಲರು ಮಧ್ಯಾಹ್ನದವರೆಗೆ ಕಲಾಪ ಬಹಿಷ್ಕರಿಸಿ ಬಂದ್ ನಲ್ಲಿ ಪಾಲ್ಗೊಂಡಿದ್ದರು.

ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕೆಲ ಸರ್ಕಾರಿ ಬಸ್ಸುಗಳ ಓಡಾಟಕ್ಕೆ ಪ್ರತಿಭಟನಾ ಕಾರರು ವಿನಾಯಿತಿ ನೀಡಿದ್ದರು. ಉಳಿದಂತೆ ಖಾಸಗಿ ಬಸ್ಸುಗಳ ಓಡಾಟ ಸ್ತಬ್ಧವಾಗಿತ್ತು. ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಚಿತ್ರಹಳ್ಳಿ, ಬಿ.ದುರ್ಗ ಮಾರ್ಗವಾಗಿ ಸಂಚರಿಸಿದವು. ಬಂದ್ ಅಂಗವಾಗಿ ಪ್ರಮುಖ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ, ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಜೆ.ಯಾದವರೆಡ್ಡಿ, ಕೆ,ಟಿ.ತಿಪ್ಪೇಸ್ವಾಮಿ, ಕೆ.ಸಿ.ಹೊರಕೇರಪ್ಪ, ಕೆ.ಟಿ.ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಎಲ್.ಕೆ.ಶಿವಕುಮಾರ್ ಸೇರಿದಂತೆ ಹಲವರು ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಬಿ.ಬಿ.ಫಾತಿಮಾ ಮನವಿ ಸ್ವೀಕರಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆ ಹಾಗೂ ಕೇಂದ್ರದ ಹುಸಿ ಭರವಸೆಗಳಿಂದಾಗಿ ಕುಂಟುತ್ತಾ ಸಾಗಿದೆ. 22 ಸಾವಿರ ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿ ಹಣಕಾಸು ಹಾಗೂ ಕಾಮಗಾರಿ ನಿರ್ವಹಣೆಯಲ್ಲಿ ತೀರ್ವ ಹಿನ್ನಡೆ ಅನುಭವಿಸುತ್ತಿದೆ. ಆರು ವರ್ಷಗಳ ಒಳಗೆ ಮುಗಿಯ ಬೇಕಿದ್ದ ಕಾಮಗಾರಿ ನಿಧಾನ ಗತಿಯಿಂದಾಗಿ 25 ವರ್ಷಗಳ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಕೂಡಾ ತಾನು ಘೋಷಿಸಿದ 5300 ಕೋಟಿ ರು. ಅನುದಾನ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿದರು. ಹೊಳಲ್ಕೆರೆ ತಾಲೂಕು ಮಲೆನಾಡ ಸೆರಗು ಎಂದೇ ಮೊದಲಿನಿಂದಲೂ ಖ್ಯಾತಿ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸಕಾಲದಲ್ಲಿ ಮಳೆ ಬಾರದ ಕಾರಣ ಸಹಸ್ರಾರು ಹೆಕ್ಚೇರು ಪ್ರದೇಶದಲ್ಲಿನ ತೋಟಗಳು ಸಂಕಷ್ಟಕ್ಕೆ ಸಿಲುಕಿದ್ದವು. ಟ್ಯಾಂಕರ್ ಮೂಲಕ ನೀರು ತಂದು ತೋಟ ಉಳಿಸಿಕೊಂಡ ಉದಾಹರಣೆಗಳು ಕಣ್ಣ ಮುಂದಿವೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕಿನ ಕೆರೆಗಳ ತುಂಬಿಸುವ ಕೆಲಸವಾಗಿದ್ದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರು ಒಂದಿಷ್ಟು ನೆಮ್ಮದಿ ಯಿಂದ ಇರುತ್ತಿದ್ದರು. ಜನ ಪ್ರತಿನಿಧಿಗಳ ಇಚ್ಚಾ ಶಕ್ತಿ ಕೊರತೆಯಿಂದಾಗಿ ಅದೂ ಕೂಡಾ ಸಾಧ್ಯವಾಗದೇ ಹೋಗಿದೆ.

ಕೇಂದ್ರ ಸರ್ಕಾರ 5300 ಕೋಟಿ ರುಪಾಯಿ ಅನುದಾನ ನೀಡಿಲ್ಲವೆಂದು ದೂರುತ್ತಾ ಕುಳಿತಿರುವ ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿ ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲ ಮಂಡಿಸಿದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಬಗ್ಗೆ ಸ್ಪಷ್ಟ ನಿಲುವು ತಾಳದೇ ಇರುವುದು ಕೂಡಾ ನೋವಿನ ಸಂಗತಿ. ಕಾಮಗಾರಿಯ ಮುಗಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಬದ್ದತೆ ಪ್ರದರ್ಶಿಸಿಲ್ಲ. ಚಿತ್ರದುರ್ಗ ಜಿಲ್ಲೆಯ ರೈತಾಪಿ ಸಮುದಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉದಾಸೀನ ಮನೋಭಾವ ಖಂಡಿಸಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಂಭಾಗ ಧರಣಿ ಕುಳಿತಿದ್ದಾರೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ತಾಲೂಕು ಹಾಗೂ ಹೋಬಳಿ ಬಂದ್ ಕಾರ್ಯಕ್ರಮಗಳು ನಡೆಯುತ್ತಿವೆ.

ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮುಂದೆ ದನಿ ಎತ್ತದೆ ಕೋಲೆ ಬಸವರಾಗಿ ಗೋಚರಿಸಿದ್ದಾರೆ. ಭದ್ರಾ ಮೇಲ್ದಂಡೆ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿದ್ರಾವಸ್ಥೆಯಿಂದ ಮೇಲೆದ್ದು ಕಾಮಗಾರಿ ಪೂರ್ಣಗೊಳಿಸಲು ಸಮರೋಪಾದಿ ಸ್ಪರ್ಶ ನೀಡಬೇಕೆಂದು ತಹಸೀಲ್ದಾರರಿಗೆ ಸಲ್ಲಿಸಲಾದ ಮನವಿ ಯಲ್ಲಿ ಆಗ್ರಹಿಸಲಾಗಿದೆ. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್,ರೈತ ಸಂಘದ ಹೊಳಲ್ಕೆರೆ ತಾಲೂಕು ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಜಯಣ್ಣ, ಹೊಸದುರ್ಗ ತಾಲೂಕು ಅಧ್ಯಕ್ಷ ಬಯಲಪ್ಪ, ಬೋರೇಶ್,ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ, ಮಂಜುನಾಥ್, ಮೊಳಕಾಲ್ಮುರು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಚಳ್ಳಕೆರೆಯ ಆರ್.ಬಿ.ನಿಜಲಿಂಗಪ್ಪ, ಹೊಳಲ್ಕೆರೆ ಪಟ್ಟಣದ ಬಿ.ಎಸ್.ರಂಗಸ್ವಾಮಿ, ಬಸವನಕೋಟೆ ಶಿವಮೂರ್ತಿ, ನಾಗರಾಜ್, ಅಜಯ್, ಸಿದ್ದರಾಮಪ್ಪ, ಹೆಚ್.ಕೆ.ಲೋಕೇಶ್, ಸೈಯದ್ ಸನಾವುಲ್ಲ, ರೈತ ಸಂಘದ ಜಿಲ್ಲಾಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ಉಪಾಧ್ಯಕ್ಷರಾದ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಹೊಳಲ್ಕೆರೆ ಮಲ್ಲಿಕಾರ್ಜುನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಿಸಿಎಂ ಕಾಟಾಚಾರದ ಪರಿಶೀಲನೆಗೆ ಆಕ್ರೋಶ

ಭದ್ರಾ ಮೇಲ್ದಂಡೆ ಕಾಮಗಾರಿ ಸ್ಥಳ ಪರಿಶೀಲನೆಗ ಭಾನುವಾರ ಆಗಮಿಸಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನಡೆಗೆ ಪ್ರತಿಭಟನಾಕಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಶಾಸಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಸಿದ್ದ ಸಚಿವರು ಇದೇ ವೇಳೆಪ್ರಗತಿ ಪರಿಶೀಲನೆ ನಾಟಕವಾಡಿದ್ದಾರೆ. ರಾಜ್ಯದ ಬಹುದೊಡ್ಡ ಯೋಜನೆಯೊಂದರ ಪ್ರಗತಿ ಪರಿಶೀಲಿಸುವಾಗ ಅದಕ್ಕೆಂದೇ ಪ್ರತ್ಯೇಕ ಸಮಯ ನಿಗಧಿ ಮಾಡಿಕೊಳ್ಳಬೇಕು. ಆದರೆ ಶಾಸಕರ ಮಗಳೋರ್ವರ ಮದುವೆಗೆ ಆಗಮಿಸಿ ಇದೇ ವೇಳೆ ತರಾತುರಿಯಲ್ಲಿ ಸಭೆ ನಡೆಸಿರುವುದು ಸರ್ಕಾರಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿ ಬಗ್ಗೆ ಇರುವ ನಿಷ್ಕಾಳಜಿ ತೋರುತ್ತದೆ ಎಂದು ಪ್ರತಿಭಟನಾಕಾರರು ದೂರಿದರು.

Share this article