ದುಗ್ಗಳ ಸದಾನಂದ
ಕೆಲವು ದಿನಗಳ ಹಿಂದೆ ಸುರಿದ ಮೊದಲ ಮಳೆಯಿಂದ ನಾಪೋಕ್ಲು ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಕಾಫಿಯ ಹೂಗಳು ಅರಳಿ ಘಮಘಮಿಸುತ್ತಿದೆ.
ಕಳೆದ ಬುಧವಾರ ಸುರಿದ ದಿಢೀರ್ ಮಳೆ ಈ ಭಾಗದ ರೈತರನ್ನು ಆತಂಕಕ್ಕೆ ದೂಡಿದೆ. ಕಾಫಿ ಕೊಯ್ಲು ಕೆಲಸ, ಭತ್ತದ ಒಕ್ಕಣೆ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಸುರಿದ ಅಲ್ಪ ಮಳೆ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಬೇತು, ಕೊಟ್ಟಮುಡಿ, ಹೊದ್ದೂರು, ನೆಲಜಿ, ಎಮ್ಮೆಮಾಡು ಬಲ್ಲಮಾವಟ್ಟಿ, ಪುಲಿಕೋಟ್ ಅಯ್ಯಂಗೇರಿ ಮತ್ತಿತರ ಭಾಗಗಳಲ್ಲಿ ಕಾಫಿಯ ಹೂಗಳು ಅರಳುತ್ತಿದ್ದು ಕಾಫಿ ಕೊಯ್ಲಿಗೆ ಅಡ್ಡಿಯಾಗುತ್ತಿದೆ. ನಿಗದಿತ ಅವಧಿಗಿಂತ ಮೊದಲು ಮಳೆ ಸುರಿದ ಪರಿಣಾಮ ಗಿಡಗಳಲ್ಲಿ ಹಣ್ಣಾದ ಕಾಫಿ ಉದುರುತ್ತಿದೆ. ಇನ್ನೊಂದೆಡೆ ಅಲ್ಪ ಪ್ರಮಾಣ ಮಳೆಯಿಂದ ಮುಂದಿನ ವರ್ಷದ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೂಮಳೆ ಸುರಿದರೆ ಕಾಫಿ ಉತ್ತಮ ಫಸಲು ನಿಶ್ಚಿತ ಎನ್ನುತ್ತಾರೆ ಬೆಳೆಗಾರರು. ಆದರೆ ಈ ವರ್ಷ ಕಾಫಿ ಕೊಯ್ಲು ಆಗುತ್ತಿರುವಾಗಲೇ ಅಂದರೆ ಜನವರಿ ತಿಂಗಳ ಎರಡನೇ ವಾರದಲ್ಲಿ ಮಳೆಯಾಗಿದೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ. ಸುರಿದ ಅಲ್ಪ ಮಳೆಗೆ ಕಾಫಿಯ ಹೂಗಳು ಅರಳಿದರೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗುತ್ತಿದೆ ಎಂಬುದು ಬಹುತೇಕ ರೈತರ ಆತಂಕ.
ಜನವರಿ ಮೊದಲ ವಾರದಲ್ಲಿ ಮಡಿಕೇರಿ ತಾಲೂಕಿನ ವಿವಿಧ ಸ್ಥಳಗಳಲ್ಲಿ 20 ಒಂದು ಇಂಚುವರೆಗೆ ಅಕಾಲಿಕ ಮಳೆ ಬಿದ್ದ ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ಮಾರ್ಚ್ ಮೊದಲ ವಾರದಲ್ಲಿ ಹೂ ಮಳೆ ಬಿದ್ದರೆ ಕಾಫಿಯ ಇಳುವರಿ ಹೆಚ್ಚಲು ಅನುಕೂಲ. ಅಕಾಲಿಕ ಮಳೆಯಿಂದಾಗಿ ಹಣ್ಣಾದ ಕಾಫಿ ಉದುರುತ್ತಿದೆ. ಕಾಫಿಯ ಗಿಡಗಳಲ್ಲಿ ಹೂವಾಗಿರುವುದರಿಂದ ಕಾರ್ಮಿಕರು ಕೆಲಸವಿಲ್ಲದೆ ಊರಿಗೆ ಹಿಂತಿರುಗಿದ್ದಾರೆ. ಕೂಲಿ ಕೆಲಸಗಾರರಿಗೂ ಸಮಸ್ಯೆಯಾಗಿದೆ. ನೆಲಕ್ಕೆ ಬಿದ್ದ ಕಾಫಿಯನ್ನು ಹೆಕ್ಕುವವರಿಲ್ಲದಾಗಿದೆ. ಇನ್ನೊಂದೆಡೆ ನಾಪೋಕ್ಲು ವ್ಯಾಪ್ತಿಯಲ್ಲಿ ಕಾಫಿ, ಕೊಯ್ಯಲು ಕೆ ಜಿ ಒಂದಕ್ಕೆ ಎಂಟರಿಂದ ರು. 10 ದರ ವನ್ನು ಕಾರ್ಮಿಕರು ಕೇಳುತ್ತಿದ್ದಾರೆ. ನಮಗೆ ಎರಡು ವರ್ಷಗಳಿಂದ ಮಳೆ ಹಾನಿ ಪರಿಹಾರ ದೊರೆತಿಲ್ಲ. 2025 ರಲ್ಲಿ 33 ಶೇ. ಗಿಂತ ಹೆಚ್ಚು ಮಳೆಹಾನಿಯಾದ ಹೋಬಳಿ ವ್ಯಾಪ್ತಿಯ ಬೆಳೆಗಾರರಿಗೆ ಪರಿಹಾರ ಒದಗಿಸಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಿಸಬೇಕಾಗಿದೆ.ಡಾ. ಸಣ್ಣವಂಡ ಕಾವೇರಪ್ಪ ಭಾರತೀಯ ಕಾಫಿ ಮಂಡಳಿ, ಮಾಜಿ ಉಪಾಧ್ಯಕ್ಷ