ಕನ್ನಡಪ್ರಭ ವಾರ್ತೆ ಕುಶಾಲನಗರಸಂವಿಧಾನದಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪಾಲಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕುಶಾಲನಗರ ತಹಸೀಲ್ದಾರ್ ಕಿರಣ್ ಜಿ. ಗೌರಯ್ಯ ಹೇಳಿದರು.
ವೇದಿಕೆಗಳು ಕೇವಲ ಭಾಷಣಗಳಿಗೆ ಮೀಸಲಾಗಿರಬಾರದು, ಭವ್ಯ ಭಾರತ ರೂಪಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಎಲ್ಲರಿಗೂ ಸಮಾನ ಶಿಕ್ಷಣ, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರದ ಮೂಲಕ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಯುವ ಪೀಳಿಗೆ ಸಮಾನತೆ, ಸಹಿಷ್ಣುತೆ ರೂಢಿಸಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನಗೈದ ಮಹಾಚೇತನಗಳ ಬಗ್ಗೆ ಸ್ಮರಣೆ ಮಾಡಬೇಕು ಎಂದರು.
ಒಟ್ಟಾಗಿ ಸೇರಿ ಒಗ್ಗಟ್ಟಿನ ಕೊರತೆಯನ್ನು ನೀಗಿಸುವ ಕೆಲಸ ಮತ್ತು ಸ್ವಚ್ಛ ಪರಿಸರ ಉಳಿಸುವುದು, ಆ ಮೂಲಕ ಸರ್ವಾಂಗೀಣ ಪ್ರಗತಿಗೆ ತಮ್ಮೆಲ್ಲರ ಪಾತ್ರ ಅಮೂಲ್ಯವಾಗಿದೆ ಎಂದು ಹೇಳಿದರು.ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ.ಸಿ. ದಯಾನಂದ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಸಂವಿಧಾನ ರೂಪುಗೊಂಡ ದಿನ ನೆನಪಿಸುವ ಅವಕಾಶ ಲಭ್ಯವಾಗುತ್ತದೆ ಎಂದರಲ್ಲದೆ ದಿನದ ಮಹತ್ವದ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.ಪೊಲೀಸ್, ಎನ್‌ಸಿಸಿ ಸೇರಿದಂತೆ ಶಾಲಾ-ಕಾಲೇಜುಗಳ ಸುಮಾರು 16 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಅವರು ಪರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತೆ ವನಿತಾ ಚಂದ್ರಮೋಹನ್, ಸಮಾಜ ಸೇವಕಿ ಸಲೀನಾ ಡಿಕುನ್ಹ, ಪೌರಕಾರ್ಮಿಕ ರಘು, ಕಲಾವಿದ ಭರಮಣ್ಣ ಬೆಟಗೇರಿ, ಸಮಾಜ ಸೇವಕ ಕೆ.ಬಿ. ರಾಜು ಅವರನ್ನು ಸನ್ಮಾನಿಸಲಾಯಿತು.