ಉಪ್ಪಾರ ಸಮಾಜದವರು ಸಂಘಟಿತರಾಗಿ: ಶಾಸಕ ಜ್ಯೋತಿ ಗಣೇಶ್

KannadaprabhaNewsNetwork | Published : May 15, 2024 1:31 AM

ಸಾರಾಂಶ

ಭಗೀರಥ ಮಹರ್ಷಿ ಜಯಂತಿಯ ವೇದಿಕೆಯು ಉಪ್ಪಾರ ಸಮಾಜದ ಸಂಘಟನೆಗೆ ಪ್ರೇರಣೆಯಾಗಲಿ, ಸಮಾಜದ ಸಂಘಟನೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಸಂಘಟನೆ ಸಮಾಜದ ಬೆಳವಣಿಗೆಗೆ ಸಹಾಯಕವಾಗುತ್ತದೆ. ವಿದ್ಯಾವಂತರು, ಆರ್ಥಿಕವಾಗಿ ಅನುಕೂಲ ಇರುವವರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಮಾರ್ಗದರ್ಶನ ನೀಡಿ, ಅವರು ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ.

ಕನ್ನಡಪ್ರಭ ವಾರ್ತೆ ತುಮಕೂರು

ಉಪ್ಪಾರ ಸಮಾಜದವರು ಸಂಘಟಿತರಾಗಿ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಉತ್ತಮ ಶಿಕ್ಷಣದಿಂದ ಆರ್ಥಿಕ ಶಕ್ತಿ, ಸಾಮಾಜಿಕ ಗೌರವ ಹೆಚ್ಚಾಗುತ್ತದೆ. ಸಮಾಜವೂ ಶಕ್ತಿವಂತವಾಗುತ್ತದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಉಪ್ಪಾರ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಗೀರಥ ಮಹರ್ಷಿ ಜಯಂತಿಯ ವೇದಿಕೆಯು ಉಪ್ಪಾರ ಸಮಾಜದ ಸಂಘಟನೆಗೆ ಪ್ರೇರಣೆಯಾಗಲಿ, ಸಮಾಜದ ಸಂಘಟನೆಗೆ ಎಲ್ಲರೂ ಸಂಕಲ್ಪ ಮಾಡಬೇಕು. ಸಂಘಟನೆ ಸಮಾಜದ ಬೆಳವಣಿಗೆಗೆ ಸಹಾಯಕವಾಗುತ್ತದೆ. ವಿದ್ಯಾವಂತರು, ಆರ್ಥಿಕವಾಗಿ ಅನುಕೂಲ ಇರುವವರು ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ, ಮಾರ್ಗದರ್ಶನ ನೀಡಿ, ಅವರು ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ. ಸಮಾಜವನ್ನು ಯಾವ ರೀತಿಯಲ್ಲಿ ಮುಂದೆ ತರಬೇಕು ಎಂಬ ದೂರದೃಷ್ಟಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಶಾಸಕರು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಗುರಿ ಮುಟ್ಟುವ ವಿಚಾರದಲ್ಲಿ ಭಗೀರಥದ ಸಮಾಜ ಸಂದೇಶ ನೀಡಿದೆ. ಛಲ ಬಿಡದೇ ಸತತ ಪ್ರಯತ್ನದ ಮೂಲಕ ಗುರಿ ಸಾಧಿಸುವುದನ್ನು ‘ಭಗೀರಥ ಪ್ರಯತ್ನ’ ಎಂದು ಕರೆಯುತ್ತಾರೆ, ಈ ಮಾತು ಪ್ರಸಿದ್ಧವಾಗಿದೆ ಎಂದರು.

ಉಪ್ಪಾರ ಸಮಾಜವು ಸಣ್ಣ ಸಮಾಜ. ಸಮಾಜದ ಬಾಂಧವರು ಒಗ್ಗಟ್ಟಿನಿಂದ ಪ್ರಯತ್ನಿಸಿದರೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಈ ಸಮಾಜದವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ಇದಕ್ಕಾಗಿ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಮಕ್ಕಳು ಶಿಕ್ಷಣದ ಮೂಲಕ ಉನ್ನತ ಸ್ಥಾನಮಾನ ಪಡೆಯಲು ಸರ್ಕಾರ ಸಹಾಯ ಮಾಡಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ತಾಂತ್ರಿಕ ಮೇಲ್ವಿಚಾರಕ ಸುರೇಶ್‌ಕುಮಾರ್, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಸಿ.ಎಸ್. ಮಂಜುನಾಥ್, ಉಪಾಧ್ಯಕ್ಷ ಎಚ್.ಆರ್.ಸತೀಶ್, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜು, ಭಗೀರಥ ಬ್ಯಾಂಕ್ ಅಧ್ಯಕ್ಷ ಇ.ಲೋಕೇಶ್, ನಿರ್ದೇಶಕರಾದ ಮೂಡಲಗಿರಿ, ಗುಂಡಗಲ್ ರಾಮಚಂದ್ರ, ಮುಖಂಡರಾದ ಡಾ.ನಾಗೇಶ್‌ಕುಮಾರ್, ಕೃಷ್ಣಪ್ಪ, ಚೆನ್ನಿಗರಾಯಪ್ಪ, ರಮೇಶ್, ಎಸ್.ನಾಗಪ್ಪ, ಅನಿಲ್, ಮೆಳೆಕೋಟೆ ಹರೀಶ್, ವಿನಯ್ ಮೊದಲಾದವರು ಭಾಗವಹಿಸಿದ್ದರು.

Share this article