ಯೂರಿಯಾ ಸ್ಟಾಕ್‌ ಖಾಲಿ ಆಗಿದೆ!

KannadaprabhaNewsNetwork |  
Published : Jul 30, 2025, 12:46 AM IST
೨೯ ಕೆಒಟಿ ೦೫: ಕೊಟ್ಟೂರಿನ ಹರ್ಷಿತ ಟ್ರೇಡಿಂಗ್ ಕಂಪನಿಯಲ್ಲಿ ಯೂರಿಯಾ ರಸಗೊಬ್ಬರವನ್ನು ಪಡೆಯಲು ಮಂಗಳವಾರ ಬೆಳಗ್ಗೆ ರೈತರು ಮುಗಿಬಿದ್ದರು. | Kannada Prabha

ಸಾರಾಂಶ

Urea stock is empty

ಕಾಡ್ಗಿಚ್ಚಿನಂತೆ ಹರಡಿದ ಮಾತು; ಈಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿ

ವಿಜಯನಗರ ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್‌ ಹೆಚ್ಚುವರಿ ಮೆಕ್ಕೆಜೋಳ ಬಿತ್ತನೆ

ಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆಯೂರಿಯಾ ನಮಗೂ ಸಿಗಲ್ಲ, ನಿಮಗೂ ಸಿಗಲ್ಲ, ಯೂರಿಯಾ ಸ್ಟಾಕ್‌ ಖಾಲಿ ಆಗಿದೆಯಂತೆ. ಬೇಗ ಬಂದು ಖರೀದಿ ಮಾಡಿ....

ಇದು ರೈತರ ಬಾಯಲ್ಲಿ ಹರಿದಾಡುತ್ತಿರುವ ಮಾತು. ರೈತರ ನಡುವೆ ಎದ್ದಿರುವ ಆತಂಕದ ಮಾತುಗಳೇ, ಬಾಯಿಂದ ಬಾಯಿಗೆ ಕಾಡ್ಗಿಚ್ಚಿನಂತೆ ಹರಡಿ, ಯೂರಿಯಾ ಎಂಬ ಗೊಬ್ಬರವನ್ನು ಈಗ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯ ಗೊಬ್ಬರವನ್ನಾಗಿಸಲಾಗಿದೆ!ವಿಜಯನಗರ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಮೊದಲೇ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಗೊಬ್ಬರ ತರಿಸಿಕೊಂಡ್ರೂ, ಯೂರಿಯಾಗಾಗಿ ಸೊಸೈಟಿಗಳ ಎದುರು ಕ್ಯೂ ನಿಲ್ಲುವುದು ಮಾತ್ರ ನಿಂತಿಲ್ಲ.

ಮೆಕ್ಕೆಜೋಳ ಬಿತ್ತನೆ ಹೆಚ್ಚಳ:

ವಿಜಯನಗರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತನೆ ಭಾರೀ ಪ್ರಮಾಣದಲ್ಲಿ ಆಗಿದೆ. ಒಂದು ಲಕ್ಷ 91 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಬಿತ್ತನೆ ಗುರಿ ಇತ್ತು. ಆದರೆ, ಈ ಬಾರಿ 2ಲಕ್ಷ 18 ಸಾವಿರ ಹೆಕ್ಟೇರ್‌ ಬಿತ್ತನೆ ಆಗಿದೆ. ಮಳೆ ಬೇಗನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರೈತರು ಈ ಸಲ ಭಾರಿ ಪ್ರಮಾಣದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 27 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.

ಒಂದು ಕಡೆಯಲ್ಲಿ ಮೆಕ್ಕೆಜೋಳ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಿರುವುದು, ಇನ್ನೊಂದೆಡೆಯಲ್ಲಿ ರೈತರ ಬಾಯಲ್ಲಿ ಯೂರಿಯಾ ಗೊಬ್ಬರ ಖಾಲಿ ಆಗಿದೆ ಎಂಬ ಆತಂಕದ ಮಾತುಗಳು ಕಾಡ್ಗಿಚ್ಚಿನಂತೆ ಹರಿದಾಡಿದೆ. ಹಾಗಾಗಿ ಯೂರಿಯಾಗಾಗಿ ಈಗ ರೈತರು ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನೊಂದೆಡೆಯಲ್ಲಿ ಅಲ್ಲಿ ಗೊಬ್ಬರ ಸಿಗುತ್ತಿಲ್ಲ ಇನ್ನೊಂದು ಸೊಸೈಟಿ ಎದುರು ರೈತರು ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿದೆ.ಈಗಾಗಲೇ ಯೂರಿಯಾ ಗೊಬ್ಬರ ಪೂರೈಕೆ ಮಾಡಬೇಕೆಂಬ ಸರ್ಕಾರದ ಆದೇಶದ ಹಿನ್ನೆಲೆ ಅಕ್ಕಪಕ್ಕದ ಜಿಲ್ಲೆಯ ರೈತರಿಗೂ ಗೊಬ್ಬರ ಪೂರೈಕೆ ಮಾಡಲಾಗಿದೆ.

ಇನ್ನು ಯೂರಿಯಾ ಗೊಬ್ಬರಕ್ಕೆ ಮಳೆ ಹಿನ್ನೆಲೆ ಬೇಡಿಕೆ ಹೆಚ್ಚಾಗಿದೆ. ಮೋಡಗಳು ಸರಿದು, ಬಿಸಿಲು ಬಂದರೆ ಬೇಡಿಕೆಯೂ ತನ್ನಿಂದ ತಾನೇ ಸರಿಯಲಿದೆ. ಆಗ ರೈತರು ಬಿಸಿಲು ನೋಡಿ, ಗೊಬ್ಬರ ಕೊಡುವುದಕ್ಕೆ ಹೋಗುವುದಿಲ್ಲ ಎಂದು ಹೇಳುತ್ತಾರೆ ಕೃಷಿ ಅಧಿಕಾರಿಗಳು.ಬೇಡಿಕೆ:

ವಿಜಯನಗರ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಬೇಡಿಕೆ, 26,293 ಟನ್‌ ಇತ್ತು. ಆದರೆ, ಭಾರೀ ಪ್ರಮಾಣದಲ್ಲಿ ಬಿತ್ತನೆ ಮಾಡಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯೇ ಗೊಬ್ಬರ ಸರಬರಾಜು ಹೆಚ್ಚಳ ಮಾಡಿದೆ. ಜಿಲ್ಲೆಗೆ 34,806 ಟನ್‌ ಯೂರಿಯಾ ಗೊಬ್ಬರ ಪೂರೈಕೆ ಮಾಡಲಾಗಿದೆ. ಈಗ ಮತ್ತೆ 3000 ಟನ್‌ ಗೊಬ್ಬರ ಜಿಲ್ಲೆಗೆ ಬರಲಿದೆ. ಜು. 29ರಂದು 400 ಟನ್‌ ಯೂರಿಯಾ ಗೊಬ್ಬರ ಮತ್ತೆ ಹೆಚ್ಚುವರಿಯಾಗಿ ಪೂರೈಕೆ ಆಗಿದೆ. ಗೊಬ್ಬರದ ಕೊರತೆ ಇಲ್ಲದಿದ್ದರೂ ನನಗೆ ಸಿಗಲ್ಲ, ತನಗೆ ಸಿಗಲ್ಲ ಎಂಬ ಮಾತುಗಳಿಂದಲೇ ಯೂರಿಯಾಕ್ಕೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಇದರಿಂದ ಮಧ್ಯವರ್ತಿಗಳು ಕೂಡ ಕಮಾಯಿ ಮಾಡಿಕೊಳ್ಳುತ್ತಿದ್ದಾರೆ. ರೈತರೇ ಇದಕ್ಕೆ ಅವಕಾಶ ಕೊಡುತ್ತಿರುವುದು ಈಗ ಗ್ರೌಂಡ್‌ ರಿಯಾಲಿಟಿಯಲ್ಲಿ ಕಂಡು ಬಂದ ಅಂಶಗಳು.

ಯೂರಿಯಾಗಾಗಿ ಮುಗಿಬಿದ್ದ ರೈತರು

ಯೂರಿಯಾ ಗೊಬ್ಬರ ಪಡೆಯಲು ಕೊಟ್ಟೂರು ತಾಲೂಕಿನ ರೈತರು ಮಂಗಳವಾರ ನಾಗರ ಪಂಚಮಿಯ ಹಬ್ಬವನ್ನು ಲೆಕ್ಕಿಸದೇ ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು.

ಬೆಳಗಿನ ಜಾವದಿಂದಲೇ ಇಲ್ಲಿನ ಅಂಗಡಿಯೊಂದರ ಮುಂದೆ ಸರತಿ ಸಾಲಿನಲ್ಲಿ ನಿಂತು ತಲಾ ಎರಡು ಚೀಲ ಗೊಬ್ಬರ ಪಡೆದರು.

ಮುಂಗಾರು ಮತ್ತು ಮುಂಗಾರು ಪರ್ವ ಮಳೆ ಉತ್ತಮವಾಗಿ ಆದ ಕಾರಣ ರೈತರು ತಮ್ಮ ತಮ್ಮ ಬೆಳೆಗಳಿಗೆ ಯೂರಿಯಾ ಗೊಬ್ಬರ ಸಿಂಪಡಿಸಬೇಕೆಂಬ ತವಕದಲ್ಲಿ ರಸಗೊಬ್ಬರ ಅಂಗಡಿ ಮತ್ತು ಕೃಷಿ ಕೇಂದ್ರದ ಬಳಿ ಗುಂಪು ಗುಂಪಾಗಿ ಬರತೊಡಗಿದ್ದು ಅಂಗಡಿಗಳವರು ಇದೀಗ ಪೊಲೀಸ್ ರಕ್ಷಣೆ ಯಲ್ಲಿ ರಸಗೊಬ್ಬರ ರೈತರಿಗೆ ವಿತರಿಸುವಂತಾಗಿದೆ.

ಪಟ್ಟಣದ ಹರ್ಷಿತ ಟ್ರೇಡಿಂಗ್ ಕಂಪನಿಯ ಅಂಗಡಿಯಲ್ಲಿ ೪೫೦ ಚೀಲ ಯೂರಿಯಾ ದಾಸ್ತಾನಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ತಾಲೂಕಿನ ನೂರಾರು ರೈತರು ಅಂಗಡಿಯ ಮುಂಭಾಗದಲ್ಲಿ ಜಮಾವಣೆಗೊಂಡು ರಸಗೊಬ್ಬರ ಪಡೆಯಲು ಮುಂದಾದರು. ಒಬ್ಬರಿಗೆ ತಲಾ ೨ ಚೀಲ ಮಾತ್ರ ಗೊಬ್ಬರ ನೀಡಲಾಯಿತು.

ಯೂರಿಯಾ ರಸಗೊಬ್ಬರದ ಕೊರತೆ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ಕೃಷಿ ಅಧಿಕಾರಿ ಶ್ಯಾಮ್‌ಸುಂದರ್, ಕೊಟ್ಟೂರಿನಲ್ಲಿನ ಪ್ರತಿ ರಸಗೊಬ್ಬರ ಅಂಗಡಿಗಳವರಿಗೆ ಸಾಕಷ್ಟು ರಸಗೊಬ್ಬರ ಸಂಗ್ರಹಿಸಿ ಇಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ಯೂರಿಯಾ ರಸಗೊಬ್ಬರ ಪಟ್ಟಣದ ಹರ್ಷಿತ ಟ್ರೇಡಿಂಗ್ ಕಂಪನಿಗೆ ಮಾತ್ರ ಬಂದಿದ್ದು ಇಂದು ರಾತ್ರಿ ಮತ್ತೊಂದು ರಸಗೊಬ್ಬರ ಅಂಗಡಿಗೆ ಸಹ ಬರಲಿದೆ. ರೈತರು ಗೊಂದಲಕ್ಕೆ ಒಳಗಾಗದೇ ಸಮಾಧಾನದಿಂದ ಪಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ