ಕೊಪ್ಪಳ:
ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವದಿಂದ ರೈತರು ಪಡುತ್ತಿರುವ ಸಂಕಷ್ಟದ ಕುರಿತು ಕನ್ನಡಪ್ರಭ ಬುಧವಾರ ವರದಿ ಪ್ರಕಟಿಸುತ್ತಿದ್ದಂತೆ ಕೃಷಿ ಇಲಾಖೆ ಮಾರುಕಟ್ಟೆಗೆ ಗೊಬ್ಬರ ಪೂರೈಸಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ರೈತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಖರೀದಿಸಿದರು.ಮಕ್ಕಳನ್ನು ಶಾಲೆ ಬಿಡಿಸಿ ಸರತಿಯಲ್ಲಿ ನಿಂತುಕೊಳ್ಳಲು ಬುಧವಾರವೂ ಪಾಲಕರು ಕರೆದುಕೊಂಡ ದೃಶ್ಯ ಸಾಮಾನ್ಯವಾಗಿತ್ತು. ನಗರದ ಟಿಎಪಿಎಂಸಿ ಮಾರುಕಟ್ಟೆಯಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆ ನಿಂತಹವರಿಗೆ ಮಧ್ಯಾಹ್ನದ ವೇಳೆಗೆ ರಸಗೊಬ್ಬರ ದೊರೆಯಿತು. ಇದರಿಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೂ ಗೊಬ್ಬರ ಸಿಕ್ಕಿತಲ್ಲ ಎಂದು ನಿಟ್ಟುಸಿರು ಬಿಟ್ಟರು.ಹಂತ-ಹಂತವಾಗಿ ಪೂರೈಕೆ:
ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈ ವರೆಗೆ ಯೂರಿಯಾ ರಸಗೊಬ್ಬರದ ಬೇಡಿಕೆ 31,252 ಮೆಟ್ರಿಕ್ ಟನ್ ಇದ್ದು ಈ ಪೈಕಿ 33,459 ಮೆಟ್ರಿಕ್ ಟನ್ ದಾಸ್ತಾನಿದೆ. ಇದರಲ್ಲಿ 28,757 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದ್ದು 4,702 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ರುದ್ರೇಶಪ್ಪ ಹೇಳಿದ್ದಾರೆ.ಈ ವಾರ ನ್ಯಾಷನಲ್ ಫರ್ಟಿಲೈಸರ್ ಲಿಮಿಟೆಡ್, ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಹಾಗೂ ಕ್ರೀಬೋಕೋ ಫರ್ಟಿಲೈಸರ್ ಲಿಮಿಟೆಡ್‌ನಿಂದ 313673 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಈ ಪೂರೈಕೆಯಿಂದ ಕೊಪ್ಪಳ ತಾಲೂಕಿಗೆ 629.03 ಟನ್, ಕುಷ್ಟಗಿ ತಾಲೂಕಿಗೆ 269.95 ಟನ್, ಯಲಬುರ್ಗಾ ತಾಲೂಕಿಗೆ 421.70 ಟನ್, ಗಂಗಾವತಿ, ಕನಕಗಿರಿ ಹಾಗೂ ಕಾರಟಗಿ ಭಾಗಗಳಿಗೆ 1,816.05 ಟನ್ ರಸಗೊಬ್ಬರ ಪೂರೈಸಲಾಗಿದೆ. ಯೂರಿಯಾ ರಸಗೊಬ್ಬರದ ಪೂರೈಕೆ ಹಂತ-ಹಂತವಾಗಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ 5,000 ಮೆಟ್ರಿಕ್ ಟನ್ ಎಸ್‌ಪಿಐಸಿ, ಎಂಎಫ್‌ಎಲ್ ಮತ್ತು ಆರ್‌ಸಿಎಫ್ ಕಂಪನಿಗಳಿಂದ ಹೆಚ್ಚಿನ ಪೂರೈಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಆತಂಕ ಬೇಡ:ರೈತರು ಆತಂಕಕ್ಕೊಳಗಾಗದೆ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಸಬೇಕು. ಇದರಿಂದ ನೀರು ಮತ್ತು ಮಣ್ಣಿನ ಸಂರಕ್ಷಣೆ ಸಾಧ್ಯ. ಅಲ್ಲದೇ, ರೈತರು ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರ ಖರೀದಿಸುವಾಗ ಮಾರಾಟಗಾರರು ಖರೀದಿ ಬಿಲ್ ನೀಡದೇ ಇರುವುದು ಅಥವಾ ಮೌಲ್ಯಕ್ಕಿಂತ ಹೆಚ್ಚು ದರದಲ್ಲಿ ಮಾರಾಟ ಮಾಡಿದರೆ ತಕ್ಷಣವೇ ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ್ 8277922143 ಕೊಪ್ಪಳ, ನಾಗರಾಜ ಕಾತರಕಿ 8277922109 ಕುಷ್ಟಗಿ, ಪ್ರಮೋದ ತುಂಬಾಳ-ಯಲಬುರ್ಗಾ 8277922107, ಸಂತೋಷ ಪಟ್ಟದಕಲ್, ಗಂಗಾವತಿ: 8277922106, ಸುನೀಲ್ ಕುಮಾರ ಎಂ. ಟಿ., (ಜಾರಿದಳ) ಕೊಪ್ಪಳ: 8277932117 ಸಂಪರ್ಕಿಸುವಂತೆ ತಿಳಿಸಿದ್ದಾರೆ.