- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆರು ಬೇಡಿಕೆಗಳ ಮನವಿ ಸಲ್ಲಿಕೆ ಕನ್ನಡಪ್ರಭ ವಾರ್ತೆ ಮಂಡ್ಯ ಕಾವೇರಿ ನೀರನ್ನು ಉಳಿಸಿಕೊಳ್ಳುವ ಸಲುವಾರ ಮುಖ್ಯಮಂತ್ರಿಗಳು ತುರ್ತಾಗಿ ಜಂಟಿ ಅಧಿವೇಶನ ಕರೆಯುವಂತೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಒತ್ತಾಯಿಸಿದರು. ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಮನವಿ ಸ್ವೀಕರಿಸಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ಕಾವೇರಿ ನೀರಿನ ಸಮಸ್ಯೆ ಇಂದಿನದ್ದಲ್ಲ. ಕಾವೇರಿಗಾಗಿ ನಾವೂ ಹಿಂದಿನಿಂದಲೂ ಹೋರಾಟ ಮಾಡುತ್ತಿದ್ದೇವೆ. ಆದರೆ, ನಮ್ಮ ನೀರಿನ ಹಕ್ಕನ್ನು ಉಳಿಸಿಕೊಳ್ಳುವುದಕ್ಕೆಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಬಾರಿ ಕಾವೇರಿ ಸಮಸ್ಯೆ ಗಂಭೀರವಾಗಿದೆ. ನೀರಿನ ಮೇಲಿನ ನಮ್ಮ ಹಕ್ಕನ್ನು ತಮಿಳುನಾಡು ಸರ್ಕಾರ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ನೀರನ್ನ ರಕ್ಷಣೆ ಮಾಡಬೇಕಿರುವುದು ನಮ್ಮ ಸರ್ಕಾರದ ಹೊಣೆ. ಸರ್ಕಾರವೇ ಅಸಹಾಯಕವಾಗಿ ಕುಳಿತರೆ ನಮಗೆ ಹೇಗೆ ನ್ಯಾಯ ಕೊಡಿಸುತ್ತೀರಿ. ಕಾವೇರಿ ವಿಚಾರವಾಗಿ ಈ ಕೂಡಲೇ ತುರ್ತಾಗಿ ಜಂಟಿ ಅಧಿವೇಶನ ಕರೆಯಬೇಕು. ಹಿಂದೆಯೇ ಜಂಟಿ ಅಧಿವೇಶನ ಕರೆದಿದ್ದರೆ ನಾವೂ ಉಸಿರಾಡಬಹುದಿತ್ತು ಎಂದು ಹೇಳಿದರು. ಒತ್ತಾಯಗಳು ಕಾವೇರಿ ಕೊಳ್ಳಕ್ಕೆ ಶಾಶ್ವತ ಪರಿಹಾರ. ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ತಕ್ಷಣ ನಿಲ್ಲಿಸಬೇಕು. ಕಾವೇರಿಗಾಗಿ ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿಯನ್ನ ಸಾರ್ವಜನಿಕರ ಮುಂದಿಡಬೇಕು. ಕಾವೇರಿ ನಿಯಂತ್ರಣ ಮಂಡಳಿ, ಪ್ರಾಧಿಕಾರದ ಆದೇಶದ ಮುಂದೆ ಸಂಕಷ್ಟದ ಪರಿಸ್ಥಿತಿ ತಿಳಿಸಿ, ಸಮರ್ಥವಾದ ವಾದ ಮಂಡಿಸಬೇಕು. ರೈತರ ಪಂಪ್ ಸೆಟ್ ಗಳಿಗೆ ಹಗಲಲ್ಲಿ ನಿರಂತರ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕಾಗಿ ಅಧಿಕಾರಿಗಳನ್ನ ಬದಲಿಸಬೇಕು. ಪ್ರಗತಿಯನ್ನು ನಿರ್ಲಕ್ಷಿಸಿರುವ ವ್ಯವಸ್ಥಾಪಕ ನಿರ್ದೇಶಕರನ್ನು ಬದಲಿಸಿ ಬೇರೆಯವರನ್ನು ನೇಮಿಸಬೇಕು.