ಕನ್ನಡಪ್ರಭ ವಾರ್ತೆ, ತುಮಕೂರುಯುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಪಕ್ಷ ನೀಡಿರುವ ಅವಕಾಶವನ್ನು ಸಮರ್ಥವಾಗಿ ಬಳಿಸಿಕೊಂಡು ಸ್ಥಳೀಯವಾಗಿ ನಾಯಕತ್ವ ರೂಪಿಸಿಕೊಳ್ಳಬೇಕು ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಲಾಹಿ ಸಿಕಂದರ್ ಹೇಳಿದರು.ಶುಕ್ರವಾರ ನಗರದಲ್ಲಿ ನಡೆದ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸಮಿತಿ ನೀಡುವ ಸೂಚನೆಗಳನ್ನು, ಕಾರ್ಯಕ್ರಮಗಳನ್ನು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಡಬೇಕು. ಪಕ್ಷದ ಕಾರ್ಯಕ್ರಮಗಳು ಜನರ ಗಮನಕ್ಕೆ ಬರುವಂತೆ ಪ್ರಚಾರ ಕಾರ್ಯದಲ್ಲೂ ಗಮನಹರಿಸಬೇಕು ಹಾಗೂ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳ ಬಗ್ಗೆ ಜನರಿಗೆ ಪರಿಚಯಿಸಿ, ಕಾಂಗ್ರೆಸ್ ಪಕ್ಷದ ಬಗ್ಗೆ ಜನರಲ್ಲಿ ಒಲವು ಮೂಡಿಸಲು ಹಾಗೂ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಮಾತನಾಡಿ, ಹಲವು ಘಟಕಗಳ ಪದಗ್ರಹಣ ಕಾರ್ಯಕ್ರಮ ಆಗಬೇಕಾಗಿದೆ. ದಿನಾಂಕ ನಿಗದಿ ಮಾಡಿಕೊಂಡು ಆಯಾ ಘಟಕಗಳವರು ಪಕ್ಷದ ಸ್ಥಳೀಯ ನಾಯಕರನ್ನು ಆಹ್ವಾನಿಸಿ ಪದಗ್ರಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಬೇಕು. ಯುವ ಕಾಂಗ್ರೆಸ್‌ನ ಐವೈಸಿ ಆ್ಯಪ್ ಬಗ್ಗೆ ಮಾಹಿತಿ ಪಡೆದು ಅದನ್ನು ಫಾಲೋ ಮಾಡಿಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಆದರೆ, ಕಾರ್ಯಕ್ರಮಗಳ ಪ್ರಚಾರ ಪಡೆಯುವುದಿಲ್ಲ, ಸೂಕ್ತ ರೀತಿಯಲ್ಲಿ ದಾಖಲು ಮಾಡುವುದಿಲ್ಲ. ಇನ್ನು ಮುಂದೆ ಎಲ್ಲಾ ಚಟುವಟಿಕೆಗಳ ಪ್ರಚಾರಕ್ಕೆಆದ್ಯತೆ ನೀಡಬೇಕು. ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷಕ್ಕೆ ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ನಿಖಿಲ್ ರಾಜಣ್ಣ ಸಲಹೆ ಮಾಡಿದರು. ಈ ವೇಳೆ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಗುರುತಿನಚೀಟಿ ವಿತರಿಸಲಾಯಿತು. ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಂದೀಪ್, ರಾಜ್ಯ ಕಾರ್ಯದರ್ಶಿ ರಮೇಶ್, ಯಶವಂತಗೌಡ, ಯುವ ಕಾಂಗ್ರೆಸ್ ವಕೀಲರ ಘಟಕದ ರಾಜ್ಯ ಕಾರ್ಯದರ್ಶಿ ರವಿಕಿರಣ, ರಾಜ್ಯ ಕಾರ್ಯದರ್ಶಿ ಹಾಗೂ ಐವೈಸಿ ಆ್ಯಪ್ ತರಬೇತುದಾರ ಕುಮಾರ್ ಸೇರಿದಂತೆ ಜಿಲ್ಲೆಯ ಯುವ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.