ನಿಮ್ಮ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ: ಪ್ರೊ.ಎನ್‌.ಕೆ.ಲೋಕನಾಥ್‌

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ಜೀವನ ರೂಪಿಸುವಲ್ಲಿ ಉನ್ನತ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಓದಿನ ದಿನಗಳಲ್ಲಿ ಕೇವಲ ಪಠ್ಯಕ್ಕೆ ಸೀಮಿತ ಆಗದೇ ಇತರೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಯ್ಕೆ ಇರುತ್ತದೆ. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಿ. ಕೇವಲ ಅಂಕಪಟ್ಟಿಯಿಂದ ಯಾವುದೇ ಪ್ರಯೋಜನ ಇಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ನಿಮ್ಮಲ್ಲಿರುವ ಜ್ಞಾನವನ್ನು ಸಮಾಜದ ಒಳಿತಿಗೆ ಬಳಸಿ. ಆತ್ಮವಿಶ್ವಾಸ ಬೆಳೆಸಿಕೊಂಡು, ನಿಮ್ಮ ಕೆಲಸ ಕಾರ್ಯಗಳ ಮೌಲ್ಯಮಾಪನ ಮಾಡಿಕೊಳ್ಳಿ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ತಿಳಿಸಿದರು.

ನಗರದ ಸರಸ್ವತಿಪುರಂನಲ್ಲಿರುವ ಎನ್‌ಎಸ್‌ಎಸ್‌ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯೋಜಿಸಿರುವ 5 ದಿನಗಳ ರಾಜ್ಯ ಮಟ್ಟದ ಯುವಜನೋತ್ಸವ- 2024- 25 ಅನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಜೀವನ ರೂಪಿಸುವಲ್ಲಿ ಉನ್ನತ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಓದಿನ ದಿನಗಳಲ್ಲಿ ಕೇವಲ ಪಠ್ಯಕ್ಕೆ ಸೀಮಿತ ಆಗದೇ ಇತರೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಯ್ಕೆ ಇರುತ್ತದೆ. ನೀವು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಿ. ಕೇವಲ ಅಂಕಪಟ್ಟಿಯಿಂದ ಯಾವುದೇ ಪ್ರಯೋಜನ ಇಲ್ಲ ಎಂದರು.

ಮೈಸೂರು ವಿವಿ ಸಿಂಡಿಕೇಟ್‌ ಸದಸ್ಯರಾದ ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಮೈಸೂರು ವಿವಿಗೆ ತನ್ನದೇ ಆದ ಘನತೆ ಇದೆ. ಎನ್‌ಎಸ್ಎಸ್ ಚಟುವಟಿಕೆಗಳಿಗೆ ಭದ್ರ ಅಡಿಪಾಯ ಹಾಕಿದ್ದು ಇಲ್ಲಿಯೇ. ಶಿಸ್ತು, ಸಂಯಮ, ಕಾಯಕ ಹಾಗೂ ಸೇವಾ ಮನೋಭಾವ ಬೆಳೆಸುವ ಯೋಜನೆ ಇದಾಗಿದ್ದು, ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ಸಿಂಡಿಕೇಟ್‌ ಸದಸ್ಯ ಗೋಕುಲ್‌ ಗೋವರ್ಧನ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತ ಆಗಿರದೇ ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮೈಸೂರು ವಿವಿ ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜಕ ಪ್ರೊ.ಎಂ.ಬಿ. ಸುರೇಶ, ಎನ್ಎಸ್ಎಸ್- ತರಬೇತಿ ಸಂಸ್ಥೆಯ ಸಂಯೋಜಕ ಪ್ರೊ.ಬಿ. ಚಂದ್ರಶೇಖರ ಮೊದಲಾದವರು ಇದ್ದರು.

ಮಹಾಜನ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ, ಬಿ.ಕಾಂ ವಿದ್ಯಾರ್ಥಿಗಳಿಗೆ ಐದು ದಿನಗಳ ಕಾರ್ಯಾಗಾರ

ನಗರದ ಮಹಾಜನ ಪ್ರಥಮ ಕಾಲೇಜಿನಲ್ಲಿ ಸೋಮವಾರ ವಾಣಿಜ್ಯಶಾಸ್ತ್ರ ಮತ್ತು ಆಡಳಿತ ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗವು ಅಥರ್ವ ಬಿಸಿನೆಸ್ ಗ್ರೂಪ್ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಅಂತಿಮ ವರ್ಷದ ಬಿಬಿಎ ಮತ್ತು ಬಿ.ಕಾಂ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವ್ಯಕ್ತಿತ್ವ ಆಭಿವೃದ್ಧಿಗಾಗಿ ಸಾಫ್ಟ್ ಸ್ಕಿಲ್ಸ್ ವಿಷಯ ಕುರಿತು ಐದು ದಿನಗಳ ಕಾರ್ಯಾಗಾರ ಉದ್ಘಾಟಿಸಲಾಯಿತು.

ಆಥರ್ವ ಬಿಸಿನೆಸ್‌ ಗ್ರೂಪ್‌ ಮುಖ್ಯ ವಾಣಿಜ್ಯಾಧಿಕಾರಿ ಮೊಹಮ್ಮದ್ ಬಿಲಾಲ್ ಸಿದ್ಧಿಖಿ ಅವರು ಐದು ದಿನಗಳ ಕಾಲ ಪ್ರತಿದಿನ ಒಂದೊಂದು ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವರು.

ರೆಸ್ಯೂಮ್ ಬರೆಯುವ ಕೌಶಲ್ಯದ ಬಗ್ಗೆ ಚರ್ಚಿಸಿ ಸ್ಥಳದಲ್ಲೇ ವಿದ್ಯಾರ್ಥಿಗಳು ತಮ್ಮ ತಮ್ಮ ರೆಸ್ಯೂಮ್ ಸಿದ್ಧ ಪಡಿಸುವಂತೆ ಸೂಚಿಸಿದರು. ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದತಮ್ಮ ರೆಸ್ಯೂಮ್ ಸಿದ್ಧಪಡಿಸಿದರು.

ಉಳಿದ ನಾಲ್ಕು ದಿನಗಳು ಸಂವಹನ ಕೌಶಲ್ಯ, ಗುಂಪು ಚರ್ಚೆ, ಉದ್ಯೋಗ ಯಶಸ್ವಿಗೆ ತಂತ್ರಜ್ಞಾನ ಸಾಕ್ಷರತೆ ಹಾಗೂ ಸಂದರ್ಶನಗಳನ್ನು ಹೇಗೆ ಎದುರಿಸಬೇಕು ? ಎಂಬ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವರು.

ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥ ಡಾ. ಶಿವಕುಮಾರ್, ಕಾರ್ಯಕ್ರಮ ಸಂಯೋಜಕಿ ಎಸ್‌. ಕಾವ್ಯಶ್ರೀ, ಸಹ ಸಂಯೋಜಕಿ ಅನಿತಾ, ಹೇಮಲತಾ, ವಿಭಾಗದ ಅಧ್ಯಾಪಕರಾದ ಡಾ. ಮುತ್ತಮ್ಮ, ಕೀರ್ತಿ ರಾಜ್‌ ಕಮಲ್ ಮತ್ತು ರಶ್ಮಿ ಇದ್ದರು.

ವಾಣಿಜ್ಯಶಾಸ್ತ್ರ ಮತ್ತು ಆಡಳಿತ ವ್ಯವಹಾರ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿ ಸಂಯೋಜಕರಾದ ನಂದಿತಾ ಎಂ ಮೇನಸಗಿ ನಿರೂಪಿಸಿದರು. ಆರ್, ಸ್ನೇಹಯು, ಕೆ.ಎಸ್‌. ಕರೀಷ್ಮ ನಿರ್ವಹಿಸಿದರು.

Share this article