ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಫಲಾನುಭವಿ ಪ್ರಧಾನವಾದ ಕಾರ್ಯಕ್ರಮಗಳನ್ನು ಬದ್ದತೆಯಿಂದ ಮಾಡಬೇಕು, ಎಲ್ಲ ಇಲಾಖೆಯ ಅಧಿಕಾರಿಗಳು ಕ್ರಿಯಾತ್ಮಕವಾಗಿ, ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಯಾವುದೇ ಕಾರ್ಯಕ್ರಮಗಳ ಅನುದಾನ ತಪ್ಪಿ ಹೋಗದಂತೆ, ವಿಳಂಬರಹಿತವಾಗಿ ನಿಗದಿತ ಅವಧಿಯೊಳಗೆ ಅನುದಾನದ ಸದ್ಬಳಕೆ ಆಗಬೇಕು. ಎಸ್‌ಸಿಪಿ, ಟಿಎಸ್‌ಪಿ ಅನುದಾನ ಶೇ.100 ಬಳಕೆ ಆಗಬೇಕು. ಜಿಲ್ಲಾಡಳಿತ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು, ವಿವಿಧ ಇಲಾಖೆಗಳು ಸಮರ್ಪಕವಾಗಿ ಅನುದಾನ ಬಳಕೆ, ಫಲಾನುಭವಿಗಳ ಆಯ್ಕೆ ಮಾಡಬೇಕು. ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಬೇಕು. ಸಿವಿಲ್ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಗಳು ವಿವಿಧ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕೆಲಸಗಳನ್ನು ಇನ್ನೂ ಪರಿಣಾಮಗೊಳಿಸಬೇಕು. ಎಲ್ಲ ಇಲಾಖೆಗಳು ಸಮಸ್ಯೆಗಳನ್ನು ಕಂಡು ಹಿಡಿಸು ಸುಧಾರಣೆ ಕಡೆ ಗಮನ ಹರಿಸಿ, ನಿಯಮಾನುಸಾರ ಕ್ರಮ ವಹಿಸಬೇಕು. ಶೇ.100 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿಡಿಪಿಐ ಮಂಜುನಾಥ್ ಮಾತನಾಡಿ, ಸೊರಬ, ಶಿಕಾರಿಪುರ ಮತ್ತು ತೀರ್ಥಹಳ್ಳಿಯಲ್ಲಿ ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಬೇಡಿಕೆ ಇದೆ. ನಿಯೋಜನೆ ಶಿಕ್ಷಕರಿಗೆ ಸಂಬಂಧಿಸಿದ ಸಮಸ್ಯೆಗಳು ಇವೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಶಾಲೆ ಬಿಟ್ಟ ಮಕ್ಕಳ ಸರ್ವೇ ಆಗಬೇಕು. ತಾಲ್ಲೂಕು ಹಂತದಲ್ಲಿ ಸರ್ವೇ ನಡೆಸಿ ಮಕ್ಕಳನ್ನು ಶಾಲೆಗೆ ಕರೆ ತರಲು ಉಸ್ತುವಾರಿ ಕಾರ್ಯದರ್ಶಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗುತ್ತಿದ್ದು, ಜುಲೈವರೆಗೆ ಮೊಟ್ಟೆ ಹಣಪಾವತಿ ಆಗಿದೆ. 2.05 ಕೋಟಿ ರು.ಹಾಲಿನ ಪೌಡರ್ ಹಣ ಬಾಕಿ ಇದೆ ಎಂದು ಅಕ್ಷರ ದಾಸೋಹ ಅಧಿಕಾರಿಗಳು ತಿಳಿಸಿದರು.
ಆಹಾರ ಇಲಾಖೆ ಉಪನಿರ್ದೇಶಕ ಅವಿನ್ ಮಾತನಾಡಿ, 3.80 ಲಕ್ಷ ಬಿಪಿಲ್ ಕಾರ್ಡುದಾರರು ಇದ್ದು, ಈ ಪೈಕಿ 6 ತಿಂಗಳು ಸತತವಾಗಿ ಪಡಿತರ ಪಡೆಯದ 8000 ಕಾರ್ಡುಗಳನ್ನು ರದ್ದುಪಡಿಸಲಾಗಿದೆ. ಇ-ಜನ್ಮ್ ಪೋರ್ಟಲ್ ಮಾಹಿತಿ ಮೇರೆಗೆ ಮರಣ ಹೊಂದಿದ 5000 ಕಾರ್ಡುದಾರರ ಹೆಸರನ್ನು ತೆಗೆದುಹಾಕಲಾಗಿದೆ. ಇನ್ನೂ ರದ್ದುಪಡಿಸುವ 1500 ಜನರ ಪಟ್ಟಿ ಇದೆ. 58 ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಪಡಿಸಿ ದಂಡ ವಿಧಿಸಲಾಗಿದೆ. 2395 ಐಟಿ ಪಾವತಿದಾರರ ಬಿಪಿಎಲ್ ನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. ಕುಟುಂಬದ ವಾರ್ಷಿಕ ವರಮಾನ 1.20 ಲಕ್ಷ ಇರುವ 53,342 ಕಾರ್ಡುಗಳು ಇವೆ. ಇವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕಿದೆ. ಹೊಸದಾಗಿ ಪಡಿತರ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದ 4963ರಲ್ಲಿ 2489 ನೀಡಲಾಗಿದೆ. 980 ತಿರಸ್ಕರಿಸಲಾಗಿದ್ದು, ಉಳಿದವನ್ನು ಮುಂದೆ ಪೋರ್ಟಲ್ ಓಪನ್ ಆದಾಗ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ಅಧಿಕಾರಿ ದಿನೇಶ್ ಮಾತನಾಡಿ, ಶೇ. 42.8 ಆದಾಯ ಶಕ್ತಿ ಯೋಜನೆಯಿಂದ ಬರುತ್ತಿದ್ದು, ಶೇ.60.5 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಯೋಜನೆ ಜಾರಿಯಾದಾಗಿನಿಂದ ಹೆಚ್ಚುವರಿ ಬಸ್‌ಗಳು ಮತ್ತು ರೂಟ್‌ಗಳ ಬೇಡಿಕೆ ಹೆಚ್ಚಿದೆ. 365 ಬಸ್‌ಗಳು ಓಡಾಡುತ್ತಿದ್ದು, 215 ರೂಟ್ ಬೇಡಿಕೆ ಇದೆ ಎಂದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಸಣ್ಣ ನೀರಾವರಿ ಇಲಾಖೆಗೆ ಪದೇ ಪದೇ ಕರೆಂಟ್ ಸರಬರಾಜು ನಿಲ್ಲಿಸಬಾರದು. ರೈತರಿಗೆ ಅನಾನುಕೂಲವಾಗು ತ್ತದೆ. ವಿವಿಧ ಇಲಾಖೆಗಳು ಮತ್ತು ಮೆಸ್ಕಾಂ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಸಬೇಕು. ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ ಮಾಹೆವರೆಗೆ 2836 ಫಲಾನುಭವಿಗಳಿಗೆ 84,72,000 ಹಣ ರು. ಪಾವತಿಯಾಗಿದೆ ಎಂದು ಉದ್ಯೋಗಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿ.ಪಂ ಸಿಇಓ ಎನ್.ಹೇಮಂತ್, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.