ಅನಂತಕುಮಾರ ಹೆಗಡೆ ಮತ್ತೆ ಸಕ್ರಿಯ ರಾಜಕಾರಣ ಪ್ರವೇಶ?

Published : Feb 28, 2026, 06:35 AM IST
Anant kumar hegde

ಸಾರಾಂಶ

ಭಟ್ಕಳ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಮಾರ್ಚ್‌ 8ರಂದು ಸಂಜೆ ನಡೆಯುವ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಲ್ಗೊಳ್ಳಲಿದ್ದಾರೆ.

ರಾಘವೇಂದ್ರ ಹೆಬ್ಬಾರ

 ಭಟ್ಕಳ :  ಭಟ್ಕಳ ನಗರದ ಹಿಂದೂ ಸಮ್ಮೇಳನ ಸಮಿತಿಯಿಂದ ಮಾರ್ಚ್‌ 8ರಂದು ಸಂಜೆ ನಡೆಯುವ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಾಲ್ಗೊಳ್ಳಲಿದ್ದಾರೆ.

ಅನಂತಕುಮಾರ ಹೆಗಡೆ ಅವರು ಕಳೆದ ಲೋಕಸಭಾ ಚುನಾವಣೆ ಟಿಕೆಟ್ ತಪ್ಪಿದ ಬಳಿಕ ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಭಟ್ಕಳದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅನಂತಕುಮಾರ ಹೆಗಡೆ ಅವರು ಟಿಕೆಟ್ ತಪ್ಪಿದ ಬಳಿಕ ರಾಜಕೀಯದಿಂದ ದೂರ ಇದ್ದು, ತಮ್ಮಷ್ಟಕ್ಕೆ ತಾವು ಉದ್ಯಮ ಮತ್ತು ಕದಂಬ ಸಹಕಾರ ಬ್ಯಾಂಕ್‌ನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ, ಅವರು ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ, ಅವರನ್ನು ಬಿಜೆಪಿ ಹೈಕಮಾಂಡ್ ಕರೆಯಿಸಿಕೊಂಡು ಚರ್ಚಿಸಿದೆ ಎಂಬ ಸುದ್ದಿ ಹರಡಿತ್ತು. ಸಾಮಾಜಿಕ ಜಾಲತಾಣದಲ್ಲೂ ಭಾರೀ ವೈರಲ್‌ ಆಗಿದ್ದರೂ ಬಿಜೆಪಿ ಮುಖಂಡರಾಗಲಿ, ಅನಂತಕುಮಾರ ಹೆಗಡೆ ಅವರಾಗಲಿ ಇದರ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.

ಭಟ್ಕಳ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ

ಈ ಸುದ್ದಿ ಚಾಲ್ತಿಯಲ್ಲಿರುವಾಗಲೇ ಅನಂತಕುಮಾರ ಹೆಗಡೆ ಅವರು ಭಟ್ಕಳ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಅಭಿಮಾನಿಗಳು ಮತ್ತು ಹಿಂದೂಪರ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. 1993ರಲ್ಲಿ ಭಟ್ಕಳದಲ್ಲಿ ಹೋರಾಟ ಮಾಡಿದ್ದ ಅನಂತಕುಮಾರ ಹೆಗಡೆ ಅವರು ಭಟ್ಕಳದಿಂದಲೇ ಹೆಚ್ಚು ಹೆಸರುವಾಸಿಯಾಗಿದ್ದರು. ಬಳಿಕ 1994ರ ಆ.15ರಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮೂಲಕ ಅವರು ಜನಪ್ರಿಯರಾಗಿದ್ದರು. ಅವರನ್ನು ಇದು ಮುಂದೆ ಆರು ಬಾರಿ ಸಂಸದ, ಒಮ್ಮೆ ಕೇಂದ್ರ ಸಚಿವ ಸ್ಥಾನದ ವರೆಗೂ ಏರಲು ಕಾರಣವಾಗಿತ್ತು. ಕಳೆದ 35 ವರ್ಷಗಳ ಹಿಂದೆ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕರಾಗಿ ಭಾಷಣ ಮಾಡಿದ ಜಾಗದಲ್ಲೇ ಅವರು ಮಾರ್ಚ್‌ 8ರಂದು ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಅನಂತಕುಮಾರ ಹೆಗಡೆ ಅವರು ಆಗಮಿಸುತ್ತಿರುವುದು ಖಚಿತಗೊಂಡ ಬಳಿಕ ಇದೊಂದು ದೊಡ್ಡ ಕಾರ್ಯಕ್ರಮವಾಗಿ ಸಾವಿರಾರು ಜನರು ಸೇರುವ ಸಾಧ್ಯತೆ ಇದೆ. ಅನಂತಕುಮಾರ ಹೆಗಡೆ ಅವರು ಭಟ್ಕಳ ನಗರ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆಂಬ ಸುದ್ದಿ ಎಲ್ಲೆಡೆ ಹರಡಿದ್ದು, ಈ ಕಾರ್ಯಕ್ರಮವೇ ಅವರು ಮತ್ತೆ ರಾಜಕೀಯ ಸಕ್ರಿಯತೆಗೆ ಕಾರಣವಾಗಲಿದೆಯೇ ಎನ್ನುವ ಕುತೂಹಲ ಉಂಟಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹಿಂದೂಪರ ಸಂಘಟನೆಯ ಪ್ರಮುಖ ಮತ್ತು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ ಅವರು, ಭಟ್ಕಳ ನಗರ ಹಿಂದೂ ಸಮಿತಿ ಆಯೋಜಿಸಿರುವ ನಗರ ಹಿಂದೂ ಸಂಗಮ ಕಾರ್ಯಕ್ರಮಕ್ಕೆ ಅನಂತಕುಮಾರ ಹೆಗಡೆ ಅವರು ಆಗಮಿಸುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಅವರ ಆಗಮನದಿಂದ ಈ ಕಾರ್ಯಕ್ರಮ ಮಹತ್ವ ಪಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಆಗಮಿಸುವ ಸಾಧ್ಯತೆ ಇದೆ ಎಂದರು.

ಲೋಕಸಭಾ ಚುನಾವಣೆ ಸಂದರ್ಭದಿಂದ ರಾಜಕೀಯದಿಂದ ದೂರ ಇದ್ದರು

ಒಟ್ಟಾರೆ ಲೋಕಸಭಾ ಚುನಾವಣೆ ಸಂದರ್ಭದಿಂದ ರಾಜಕೀಯದಿಂದ ದೂರ ಇದ್ದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಈ ಹಿಂದೆ ತಮಗೆ ರಾಜಕೀಯ ಮುನ್ನೆಲೆಗೆ ಕಾರಣವಾಗಿದ್ದ ಭಟ್ಕಳದಿಂದಲೇ ಮತ್ತೆ ರಾಜಕೀಯದಲ್ಲಿ ಸಕ್ರಿಯ ಆಗುತ್ತಾರಾ? ಎನ್ನುವುದು ಕಾದು ನೋಡಬೇಕಿದೆ. ಮಾರ್ಚ್ 8ರ ಅನಂತಕುಮಾರ ಹೆಗಡೆ ಅವರ ದಿಕ್ಸೂಚಿ ಭಾಷಣದತ್ತ ಎಲ್ಲರ ಚಿತ್ತ ಇದೆ.

ಮಾ.8 ರಂದು ಸಂಜೆ 5 ಗಂಟೆಗೆ ಭಟ್ಕಳ ಹಳೇ ಬಸ್‌ ನಿಲ್ದಾಣದ ಬಳಿಯ ಆಟೋ ಚಾಲಕರ ಗಣೇಶೋತ್ಸವ ಮೈದಾನದಲ್ಲಿ ನಗರ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ವಹಿಸುತ್ತಾರೆ. ಅನಂತಕುಮಾರ ಹೆಗಡೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

- 2 ವರ್ಷ ಬಳಿಕ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ

- ಮಾ.8ಕ್ಕೆ ಭಟ್ಕಳ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ

- ಅನಂತಕುಮಾರ್‌ ಹೆಗಡೆ ಅವರಿಗೆ 2024ರಲ್ಲಿ ಲೋಕಸಭೆ ಚುನಾವಣೆ ಟಿಕೆಟ್‌ ಕೈತಪ್ಪಿತ್ತು

- ಬಳಿಕ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಇದ್ದ ಕೇಂದ್ರದ ಮಾಜಿ ಸಚಿವ ಅನಂತ್‌

- ಉದ್ಯಮ, ಸಹಕಾರ ಚಟುವಟಿಕೆಯಲ್ಲಿ ಭಾಗಿ. ಅವರ ರಾಜಕೀಯ ಪ್ರವೇಶ ಬಗ್ಗೆ ಇತ್ತೀಚೆಗೆ ವದಂತಿ

- ಮಾ.8ರಂದು ಭಟ್ಕಳ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗಿ

- 35 ವರ್ಷ ಹಿಂದೆ ಹಿಂದೂ ಜಾಗರಣಾ ವೇದಿಕೆ ಮೂಲಕ ಅಲ್ಲೇ ಮೊದಲ ಭಾಷಣ ಮಾಡಿದ್ದ ಅನಂತ್‌

PREV
Get the latest news, developments and stories from Uttara Kannada district (ಉತ್ತರ ಕನ್ನಡ ಸುದ್ದಿ) — covering local politics, environment, coastal community, infrastructure, tourism, disasters, culture and social issues on Kannada Prabha News.
Read more Articles on

Recommended Stories

ಕಾಳಿ ನದಿ ನೀರಾವರಿ ಯೋಜನೆ ಆಗ್ರಹಿಸಿ ರೈತರಿಂದ ಪಾದಯಾತ್ರೆ ಆರಂಭ
ಕೃಷಿಯ ಬಗ್ಗೆಯೂ ವಿದ್ಯಾರ್ಥಿಗಳು ಆಲೋಚಿಸುವಂತಾಗಲಿ: ಮಂಜುನಾಥ್ ಜಿ. ಭಟ್