ಈಗಂತೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳದ್ದೆ ಹವಾ. ವಿವಾಹಕ್ಕೂ ಮುನ್ನ ಮೋಹಕ ತಾಣಗಳಲ್ಲಿ ಪ್ರೇಮಿಗಳಂತೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಯುವ ಜನತೆ ಮುಗಿಬೀಳುತ್ತಾರೆ. ಇಂಥವರಿಗೆ ಹೇಳಿ ಮಾಡಿಸಿದ ತಾಣವಾಗಿ ಹೊನ್ನಾವರ ಹೊರಹೊಮ್ಮಿದೆ.
ವಸಂತಕುಮಾರ್ ಕತಗಾಲ
ಕಾರವಾರ : ಈಗಂತೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಳದ್ದೆ ಹವಾ. ವಿವಾಹಕ್ಕೂ ಮುನ್ನ ಮೋಹಕ ತಾಣಗಳಲ್ಲಿ ಪ್ರೇಮಿಗಳಂತೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಯುವ ಜನತೆ ಮುಗಿಬೀಳುತ್ತಾರೆ. ಇಂಥವರಿಗೆ ಹೇಳಿ ಮಾಡಿಸಿದ ತಾಣವಾಗಿ ಹೊನ್ನಾವರ ಹೊರಹೊಮ್ಮಿದೆ. ಅಪ್ಸರಕೊಂಡ ಬೀಚ್, ಮ್ಯಾಂಗ್ರೋ ವಾಕ್ ಹಾಗೂ ಶರಾವತಿ ಹಿನ್ನೀರಿನಲ್ಲಿ ಮದುವೆ ಹಂಗಾಮಿನಲ್ಲಿ ಕ್ಯಾಮೆರಾ ಎದುರು ಪ್ರೇಮಿಗಳದ್ದೆ ಕಲರವ.
ಅಪ್ಸರಕೊಂಡ ಕಡಲತೀರಕ್ಕೆ ಹೋಗಿ ನೋಡಿದರೆ ಬೆಳಕಿನ ಮರ ಗಿಡಗಳು, ಎತ್ತಿನ ಗಾಡಿ, ಚಕ್ರಗಳು, ಲ್ಯಾಂಬ್ರೆಟಾ, ಹೃದಯದಾಕಾರದ ಬಿದಿರಿನ ಆಕೃತಿಗಳು, ಮಂಟಪಗಳು, ಅಲ್ಲಲ್ಲಿ ಮದುವೆ ಆಗಲಿರುವ ಹುಡುಗ, ಹುಡುಗಿ ಕೈ ಕೈ ಹಿಡಿದುಕೊಂಡು ಪ್ರೇಮಿಗಳಂತೆ ಫೋಟೋಕ್ಕೆ ಫೋಸ್ ಕೊಡುವ ನೋಟಗಳು.
ಶರಾವತಿ ಹಿನ್ನೀರಿನಲ್ಲಿ ಸುಮಾರು 700ರಷ್ಟು ಅಲಂಕೃತ ಬೋಟುಗಳಿವೆ. ಬಾಗಿ ಬಂದ ತೆಂಗಿನಮರಗಳು, ದಟ್ಟವಾಗಿ ಬೆಳೆದ ಮ್ಯಾಂಗ್ರೋ ಕಾಡುಗಳ ನಡುವೆ ಬೋಟಿಂಗ್‌ನಲ್ಲಿ ಫೋಟೋಶೂಟ್ ನಡೆಯುತ್ತಿರುತ್ತವೆ. ಪ್ರವಾಸೋದ್ಯಮದ ಜತೆ ಫೋಟೋ ಶೂಟ್ ಹೆಚ್ಚುತ್ತಿದೆ.
ಅಪ್ಸರಕೊಂಡ ಕಡಲತೀರದಲ್ಲಿ ಒಂದು ದಿನಕ್ಕೆ 88 ಜೋಡಿಗಳ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿದ್ದು, ಇದುವರೆಗಿನ ದಾಖಲೆಯಾಗಿದೆ. ಶರಾವತಿ ಹಿನ್ನೀರಿನಲ್ಲಿ ಒಂದೇ ದಿನದಲ್ಲಿ ನೂರಕ್ಕೂ ಹೆಚ್ಚು ಜೋಡಿಗಳ ಫೋಟೋಶೂಟ್ ನಡೆದಿದೆ. ಈ ಎರಡೂ ತಾಣಗಳಲ್ಲಿ ಮದುವೆ ಹಂಗಾಮಿನಲ್ಲಿ 5 ಸಾವಿರಕ್ಕೂ ಹೆಚ್ಚು ಫೋಟೋ ಶೂಟ್‌ಗಳು ನಡೆಯುತ್ತವೆ.
ಕೇವಲ ನಮ್ಮ ರಾಜ್ಯದಿಂದ ಅಷ್ಟೇ ಅಲ್ಲ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌ಗಳಿಂದಲೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗೆ ಇಲ್ಲಿಗೆ ಆಗಮಿಸುತ್ತಾರೆ. ಕೇರಳ, ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಬೀಚ್‌ಗಳಿವೆ. ಆದರೂ ಅಲ್ಲಿಂದ ಹೊನ್ನಾವರಕ್ಕೆ ಓಡೋಡಿ ಬರಲು ಕಾರಣ ಇದು ಹೊಸ ತಾಣ. ಅಲ್ಲಿನ ಬೀಚ್‌ಗಳು, ಹಿನ್ನೀರು ಈಗ ಬೇಸರ ಬಂದಿದೆ. ಹೀಗಾಗಿ 3-4 ವರ್ಷಗಳಿಂದ ಹೊನ್ನಾವರದತ್ತ ಯುವ ಜನತೆ ಹರಿದುಬರುತ್ತಿದ್ದಾರೆ.
ಅಪ್ಸರಕೊಂಡ ಬೀಚಿನಲ್ಲಿ ಫೋಟೋಶೂಟ್ ಮಾಡುವವರಿಗಾಗಿ ಸೆಟ್ ರೆಡಿ ಮಾಡುವುದರಲ್ಲಿ ಸ್ಥಳೀಯರು ತೊಡಗಿಕೊಂಡಿದ್ದಾರೆ. ಬಯಸಿದ ಸೆಟ್ ಅನ್ನು ತಕ್ಷಣ ರೆಡಿ ಮಾಡಿಕೊಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ಬೋಟ್‌ಗಳನ್ನು ಬೇಡಿಕೆಗೆ ತಕ್ಕಂತೆ ಶೃಂಗರಿಸಲಾಗುತ್ತದೆ. ಪ್ರತಿ ಗಂಟೆಗೆ ₹1000 -1500ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಸ್ಥಳೀಯರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಿದೆ.