ದಾವಣಗೆರೆ : ಹರಿಹರದ ಪಂಚಮಸಾಲಿ ಪೀಠದ ಟ್ರಸ್ಟಿಗಳು ದಾವಣಗೆರೆಯಿಂದ ಖಾಸಗಿ ಕಾಲೇಜು ಬಸ್ಸಿನಲ್ಲಿ ಹನಗವಾಡಿ ಸಮೀಪದ ಶ್ರೀಪೀಠಕ್ಕೆ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಟ್ರಸ್ಟಿಗಳಾದ ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು ನೇತೃತ್ವದಲ್ಲಿ ತಲುಪಿ, ಟ್ರಸ್ಟಿಗಳ ಸಭೆ ನಡೆಸಿದರು.
ಸಭೆಯಲ್ಲಿ ಶ್ರೀ ಪೀಠದ ಬೆಳವಣಿಗೆಗಳು, ಸ್ವಾಮೀಜಿಗೆ ಟ್ರಸ್ಟ್ ನೀಡಿದ್ದ ಸಲಹೆ ಪಾಲನೆ ಮಾಡದಿರುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ, ಅಂತಿಮವಾಗಿ ಶ್ರೀಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರಿಗೆ ಪದಚ್ಯುತಗೊಳಿಸಲು ಒಮ್ಮತದ ತೀರ್ಮಾನ ಕೈಗೊಂಡಿತು.
ಟ್ರಸ್ಟ್ ಕಾರ್ಯದರ್ಶಿ ಕೆ.ಎಂ.ಜ್ಯೋತಿಪ್ರಕಾಶ, ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಜಿ.ಪಿ.ಪಾಟೀಲ, ಚಂದ್ರಶೇಖರ ಪೂಜಾರ ಸೇರಿದಂತೆ 12ಕ್ಕೂ ಹೆಚ್ಚು ಟ್ರಸ್ಟಿಗಳು ಭಾಗವಹಿಸಿದ್ದರು. ಸುಮಾರು ಹೊತ್ತು ನಡೆದ ಸಭೆಯಲ್ಲಿ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು. ಸಭೆಯ ನಂತರ ಸ್ವಾಮೀಜಿ ಪದಚ್ಯುತಿ ನಿರ್ಧಾರಕ್ಕೆ ಬರಲಾಯಿತು. ಸಭೆ ಮುಕ್ತಾಯಗೊಂಡ ನಂತರ ಟ್ರಸ್ಟಿ ಬಸವರಾಜ ದಿಂಡೂರು ಮಾತನಾಡಿ, ವಚನಾನಂದ ಸ್ವಾಮೀಜಿ ನಾನೇ ಪ್ರಮಾಣ ವಚನ ಬೋಧಿಸಿದ್ದೆ. ಹರಿಹರದ ಪೀಠ ಅಥವಾ ಶ್ವಾಸಪೀಠದ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಸ್ವಾಮೀಜಿಗೆ ಹಿಂದೆಯೇ ಹೇಳಿದ್ದೆವು. ನಿರಂತರವಾಗಿ ಹೇಳುತ್ತಲೇ ಬಂದಿದ್ದೆವು. ಆದರೆ, ಸ್ವಾಮೀಜಿ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಕಾರಣ ಹರಿಹರ ಪಂಚಮಸಾಲಿ ಪೀಠದಿಂದ ಪದಚ್ಯುತಗೊಳಿಸಿದ್ದೇವೆ. ಇದು ಟ್ರಸ್ಟಿಗಳ ಸರ್ವಾನುಮತದ ನಿರ್ಣಯ ಎಂದರು.
ಸಮಾಜದ ಹಿರಿಯ ಮುಖಂಡ, ಟ್ರಸ್ಟಿ ಬಾವಿ ಬೆಟ್ಟಪ್ಪ ಮಾತನಾಡಿ, ನಾವೆಲ್ಲಾ 12 ಟ್ರಸ್ಟಿಗಳು ನಿರ್ಧರಿಸಿ, ಸರ್ವಾನುಮತದಿಂದ ವಚನಾನಂದ ಸ್ವಾಮೀಜಿಗೆ ನಮ್ಮ ಪೀಠದಿಂದ ಉಚ್ಛಾಟನೆ ಮಾಡಿದ್ದೇವೆ. ಮಾ.24ರ ಒಳಗೆ ಹರಿಹರ ಪೀಠ ಅಥವಾ ಶ್ವಾಸಗುರು ಪೀಠದಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳುವಂತೆ ಹೇಳಿದ್ದೆವು. ಆದರೆ, ಮಾ.24ನೇ ತಾರೀಖು ನಡೆಯಬೇಕಿದ್ದ ಟ್ರಸ್ಟ್ ಸಭೆಯನ್ನು ಚುನಾವಣೆ ಕಾರಣಕ್ಕೆ ಪೊಲೀಸ್ ಇಲಾಖೆ ಸಲಹೆ ಮೇರೆಗೆ ಮುಂದೂಡಿದ್ದೆವು. ಈಗ ಸ್ವಾಮೀಜಿ ಗೌರವಯುತವಾಗಿ ಶ್ರೀಪೀಠ, ಇಲ್ಲಿನ ನಿವಾಸವನ್ನು ಖಾಲಿ ಮಾಡಬೇಕು. ಅಗತ್ಯ ಬಿದ್ದರೆ ಪೊಲೀಸ್ ನೆರವು ಪಡೆಯುತ್ತೇವೆ. ಸಮಾಜ ಅಥವಾ ಟ್ರಸ್ಟ್ ಅಂತಾ ಹೇಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಟ್ರಸ್ಟಿ ಜಿ.ಪಿ.ಪಾಟೀಲ ಮಾತನಾಡಿ, ಸ್ವಾಮೀಜಿ ಉಚ್ಛಾಟನೆ ನಿರ್ಧಾರವು ಯಾವುದೇ ಟ್ರಸ್ಟಿಗಳಿಗಳಾಗಲೀ, ಟ್ರಸ್ಟ್‌ನ ವೈಯಕ್ತಿಕ ನಿರ್ಧಾರವಾಗಲೀ ಅಲ್ಲ. ಇದು ಪಂಚಮಸಾಲಿ ಸಮಾಜದ ನಿರ್ಧಾರ. ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯುವುದಕ್ಕೆ ಸಿದ್ಧರಿಲ್ಲ. ಶ್ವಾಸಗುರು ಪೀಠವನ್ನು ಸ್ವಾಮೀಜಿ ಬಿಡಲು ಸಿದ್ಧರಿಲ್ಲದಿರುವುದೇ ಉಚ್ಛಾಟನೆಗೆ ಮುಖ್ಯ ಕಾರಣ ಅಲ್ಲ. ಉಳಿದಂತಹ ಕಾರಣಗಳು ಇರುತ್ತವೆ. ಅವು ಏನೆಂಬುದರ ಬಗ್ಗೆ ಪ್ರತಿಗಳನ್ನೇ ನೀಡುತ್ತೇವೆ ಎಂದು ಹೇಳಿದರು.
ಸಭೆಯನ್ನು ಮುಗಿಸಿ, ಮಾಧ್ಯಮಗಳ ಮುಂದೆ ಟ್ರಸ್ಟಿಗಳ ಸಭೆಯ ಒಮ್ಮತದ ತೀರ್ಮಾನ ಪ್ರಕಟಿಸಿದ ನಂತರ ಟ್ರಸ್ಟಿಗಳು ತಾವು ಬಂದಿದ್ದ ಕಾಲೇಜು ಬಸ್ಸಿನಲ್ಲೇ ದಾವಣಗೆರೆಗೆ ಮರಳಿದರು.
ಶ್ರೀಮಠದ ಮುಖ್ಯ ಗೇಟ್ ಬಳಿ ನಿಂತಿದ್ದವರಿಂದ ಟ್ರಸ್ಟಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲ್ಪಟ್ಟವು. ಸಂಜೆ 5 ಗಂಟೆವರೆಗೆ ಶ್ರೀಮಠದ ಸುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇದ್ದ ಹಿನ್ನೆಲೆಯಲ್ಲಿ ಪೊಲೀಸ್ ಕಾವಲಿತ್ತು. ಸಂಜೆ 5 ನಂತರ ಸ್ವಾಮೀಜಿ ಭೇಟಿ ಮಾಡಲು ವಿವಿಧೆಡೆಯಿಂದ ಭಕ್ತರು ಮಠಕ್ಕೆ ಧಾವಿಸಿದರು. ಸದ್ಯ ಮಠದಲ್ಲೇ ಇರುವ ಸ್ವಾಮೀಜಿ ಭೇಟಿಗೆ ಮಾಡಲಿರುವ ಭಕ್ತರ ಜೊತೆಗೆ ಸಭೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟ್ರಸ್ಟ್ ನಿರ್ಧಾರದ ವಿರುದ್ಧ ಲೆಕ್ಕ ಕೊಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ, ನಂದಿಹಳ್ಳಿ ಹಾಲಪ್ಪ, ಅರುಣಕುಮಾರ ಪೂಜಾರ, ಶ್ರೀಮಠದ ಆಡಳಿತಾಧಿಕಾರಿ ಡಾ.ರಾಜಕುಮಾರ, ಬಿ.ಜೆ. ಅಜಯಕುಮಾರ ಇತರರು ಸ್ವಾಮೀಜಿಗೆ ಭೇಟಿ ಮಾಡಿ, ಮುಂದಿನ ಹೋರಾಟದ ಕುರಿತಂತೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.