ಬಳ್ಳಾರಿ: ಜಾತಿಗಣತಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಏಕಲವ್ಯ ಪಡೆ ಜಿಲ್ಲಾ ಘಟಕ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಮಾತನಾಡಿದ ವಾಲ್ಮೀಕಿ ಸಮುದಾಯದ ಮುಖಂಡರು, ರಾಜ್ಯದ ಬಹುಸಂಖ್ಯಾತ ದಮನಿತ ಹಾಗೂ ಶೋಷಿತ ಸಮುದಾಯಗಳಿಗೆ ಜಾತಿ ಜನಗಣತಿಯ ದತ್ತಾಂಶ ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಜಾತಿ ಆಧಾರಿತ ತಾರತಮ್ಯ ನಿಲುವುಗಳು ದೇಶದಲ್ಲಿ ಇನ್ನು ಜಾರಿಯಲ್ಲಿರುವುದರಿಂದ ಜಾತಿ ಗಣತಿಯ ದತ್ತಾಂಶ ಬಳಸಿಕೊಂಡು ಶೋಷಿತ ಸಮುದಾಯವನ್ನು ಗುರುತಿಸಲು ಹಾಗೂ ನೀತಿ ರೂಪಣೆಯಲ್ಲಿ ಅವರನ್ನು ಮುನ್ನಲೆಗೆ ತರಲು ಸಹಾಯಕವಾಗಲಿದೆ. ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಸಹ ಜಾತಿಗಣತಿ ದತ್ತಾಂಶ ಸಹಕಾರಿಯಾಗಲಿದೆ. ಸಾಮಾಜಿಕ ಸಂಬಂಧಗಳು, ಆರ್ಥಿಕ ಅವಕಾಶಗಳು ಮತ್ತು ರಾಜಕೀಯ ಚಲನಶೀಲತೆಗೆ ಪೂರಕವಾಗಲಿದೆ. ಈ ಎಲ್ಲ ಕಾರಣಗಳಿಂದ ಜಾತಿ ಜನಗಣತಿಯನ್ನು ಸರ್ಕಾರ ಬಿಡುಗಡೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯದ ಎರಡು ಪ್ರಭಾವಿ ಸಮುದಾಯಗಳಕ್ಕೆ ವಿರೋಧವನ್ನು ಸಿಎಂ ಸಿದ್ದರಾಮಯ್ಯ ಹೆಚ್ಚು ಗಂಭೀರವಾಗಿ ಪರಿಗಣಿಸಬಾರದು. ಒಂದು ವೇಳೆ ಜಾತಿಜನಗಣತಿ ದತ್ತಾಂಶವನ್ನು ಬಿಡುಗಡೆಗೊಳಿಸದಿದ್ದರೆ ದಲಿತ, ದಮನಿತ, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಸತ್ಯ ಇತಿಹಾಸದಲ್ಲಿ ದಾಖಲಾಗುತ್ತದೆ. ದಲಿತ ಹಾಗೂ ಹಿಂದುಳಿದ ಸಮುದಾಯಗಳ ಪರ ಎಂದು ಬಿಂಬಿತಗೊಂಡಿರುವ ಮುಖ್ಯಮಂತ್ರಿ ಕೂಡಲೇ ಜಾತಿ ಜನಗಣತಿ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ಏಕಲವ್ಯ ಪಡೆಯ ಜಿಲ್ಲಾಧ್ಯಕ್ಷ ಬಾದಾಮಿ ಶಿವಲಿಂಗ ನಾಯಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮುಖಂಡರಾದ ವಿ.ಎಸ್.ಶಿವಶಂಕರ್, ಎನ್.ಸತ್ಯನಾರಾಯಣ, ತಿಮ್ಮಪ್ಪ ಜೋಳದರಾಶಿ, ಎಲ್.ಮಾರೆಣ್ಣ, ಜನಾರ್ದನ ನಾಯಕ, ಶಿಕಾಮಣಿ ನಾಯಕ, ಬಿ.ಜಯರಾಮ್, ವಿರುಪಣ್ಣ, ಭೋಗರಾಜ್, ಗಾದಿಲಿಂಗ ನಾಯಕ, ಹಮಾಲಿ ತಿಮ್ಮಪ್ಪ, ಬೆಣಕಲ್ ಸುರೇಶ್, ಹಡ್ಲಿಗಿ ಮಾರೆಪ್ಪ, ಸಂಗನಕಲ್ಲು ವಿಜಯಕುಮಾರ್, ಬಿ.ಗಿರಿಯಪ್ಪ, ಬಿ.ಈಶ್ವರಪ್ಪ ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು.