ಮಹರ್ಷಿ ವಾಲ್ಮೀಕಿ ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿದ ಶಾಸಕ ಹೆಬ್ಬಾರ
ಜಗತ್ತಿಗೇ ಅದರಲ್ಲೂ ಮನುಕುಲಕ್ಕೆ ದಾರ್ಶನಿಕ ಚಿಂತನೆಯನ್ನು ನೀಡಿದ ವಾಲ್ಮೀಕಿ ಮಹರ್ಷಿಗಳು ಜಾತಿಗೆ ಮೀರಿದ ವ್ಯಕ್ತಿತ್ವ ಹೊಂದಿದ ಮಹಾನ್ ಜಾತ್ಯತೀತವಾದಿ. ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಕೃತಿಯನ್ನು ನೀಡಿ ಸಮಾಜ ಸನ್ಮಾರ್ಗದಲ್ಲಿ ಸಾಗುವುದಕ್ಕೆ ಅನೇಕ ಋಷಿಮುನಿಗಳ ಸಾಲಿನಲ್ಲಿ ಸೇರಿದ ಶ್ರೇಷ್ಠ ವ್ಯಕ್ತಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಮಂಗಳವಾರ ಪಟ್ಟಣದ ಗಾಂಧಿ ಕುಟೀರದಲ್ಲಿ ತಾಲೂಕಾಡಳಿತ, ತಾಪಂ, ಪಪಂ, ಸಮಾಜಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಜಯಂತಿಯ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಅವರ ಚಿಂತನೆಗಳು, ಆದರ್ಶಗಳು ನಮಗೆ ಸದಾ ಮಾರ್ಗದರ್ಶನವಾಗಿದೆ. ನಾವು ತಾರತಮ್ಯ ಸಮಾಜದ ವೈರುದ್ಯ ಮರೆತು ಒಂದಾಗಿ ಬದುಕುವುದಕ್ಕೆ ಶ್ರೇಷ್ಠವಾದ ಚಿಂತನೆ ನೀಡಿದವರು. ಅಂತಹ ಪುರುಷರ ಜಯಂತಿಯನ್ನು ನಾವಿಂದು ಆಚರಿಸುತ್ತಿದ್ದೇವೆ ಎಂದರು.
ವೈ.ಟಿ.ಎಸ್.ಎಸ್. ಪ್ರೌಢಶಾಲಾ ಶಿಕ್ಷಕ ವಿನೋದ ಭಟ್ಟ ಉಪನ್ಯಾಸ ನೀಡಿ, ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು. ದರೋಡೆ ಮಾಡುವುದನ್ನು ಬಿಟ್ಟು ರಾಮಾಯಣ ಕೃತಿಯನ್ನು ರಚಿಸಿದ ವಾಲ್ಮೀಕಿ ಮಹರ್ಷಿಗಳು ಪ್ರತಿಯೊಬ್ಬ ಮನುಷ್ಯರಿಗೂ ಆದರ್ಶಪ್ರಾಯರಾಗಿದ್ದಾರೆ. ಎಂತಹ ಕೆಟ್ಟ ವ್ಯಕ್ತಿಯಾಗಿದ್ದರೂ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಕಾರ್ಯ ಮಾಡಿ, ಶ್ರೇಷ್ಠ ವ್ಯಕ್ತಿಯಾದರೆ ಹೇಗೆ ಗೌರವ ದೊರೆಯುತ್ತದೆಂಬುದಕ್ಕೆ ಇಂತಹ ಅನೇಕ ಸಾಧಕರು ನಮಗೆ ದಾರಿದೀಪವಾಗಿದ್ದಾರೆ ಎಂದರು.
ಈ ಸಂದರ್ಭ ಸೌಥ್ ಝೊನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಮಂಚೀಕೇರಿಯ ಸಾನಿಯಾ ಮೊನಾಲಿಸಾಬ್ ಅವರನ್ನು ಪುರಸ್ಕರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜ್ಯೋತಿ ನರೋಟಿ ಸ್ವಾಗತಿಸಿದರು. ಶಿಕ್ಷಕರಾದ ಚಂದ್ರಹಾಸ ನಾಯ್ಕ ನಿರ್ವಹಿಸಿದರು. ದಿಲೀಪ ದೊಡ್ಮನಿ ವಂದಿಸಿದರು. ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಾಲ್ಮೀಕಿಯವರ ಭಾವಚಿತ್ರ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.