ಜಾತಿಗಿಂತ ಗುಣಕ್ಕೆ ಮಹತ್ವ ಸಾರಿದ ವಾಲ್ಮೀಕಿ ರಾಮಾಯಣ: ಸಚಿವ ಪ್ರಹ್ಲಾದ ಜೋಶಿ

KannadaprabhaNewsNetwork |  
Published : Oct 26, 2026, 02:00 AM IST
ಹುಬ್ಬಳ್ಳಿ ಬಮ್ಮಾಪುರ ಓಣಿಯ ಶ್ರೀ ಗುರುಸಿದ್ದೇಶ್ವರ ಕಲ್ಯಾಣಮಠದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾಗಿಯಾದರು. | Kannada Prabha

ಸಾರಾಂಶ

ಸಮಾನತೆ ಕೇವಲ ಭಾಷಣಕ್ಕೆ ಸೀಮಿತವಾಗದೆ, ಬದುಕಿನಲ್ಲೂ ಪಾಲನೆಯಾಗಬೇಕು. ಜಾತಿ ಆಧರಿತ ಮೇಲು- ಕೀಳು ಭಾವನೆ ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕು.

ಹುಬ್ಬಳ್ಳಿ: ಜಾತಿಗಿಂತ ವ್ಯಕ್ತಿಯ ಗುಣ, ನಡತೆ ಮುಖ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಜಗತ್ತಿಗೆ ಸಾರಿದ್ದಾರೆ. ಸಮಾಜದಲ್ಲಿ ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಎಂಬ ಭೇದಭಾವಕ್ಕೆ ಅವಕಾಶವಿರಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಇಲ್ಲಿನ ನಗರದ ಬಮ್ಮಾಪುರ ಓಣಿಯ ಶ್ರೀ ಗುರುಸಿದ್ದೇಶ್ವರ ಕಲ್ಯಾಣಮಠದಲ್ಲಿ ಭಾನುವಾರ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್‌ಟಿ ಮೋರ್ಚಾ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 139ನೇ ಮನ್‌ ಕೀ ಬಾತ್‌ ಆಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಮಾಯಣದ ನಾಯಕ ಶ್ರೀರಾಮನಾದರೆ, ಅದರ ಕರ್ತೃ ಮಹರ್ಷಿ ವಾಲ್ಮೀಕಿ. ರಾವಣ ಬ್ರಾಹ್ಮಣನಾಗಿದ್ದರೂ ದುರ್ಗುಣಗಳಿಂದ ಖಳನಾಯಕನಾಗುತ್ತಾನೆ. ಇದರಿಂದ ವ್ಯಕ್ತಿಯ ಜಾತಿಗಿಂತ ಗುಣಕ್ಕೆ ಮಹತ್ವ ನೀಡಬೇಕು ಎಂಬ ಸಂದೇಶ ಸ್ಪಷ್ಟವಾಗುತ್ತದೆ. ವಾಲ್ಮೀಕಿ ಅವರು ರಚಿಸಿದ ರಾಮಾಯಣ ಇಂದಿಗೂ ಜಗತ್ತಿಗೆ ಆದರ್ಶಪ್ರಾಯವಾಗಿದೆ ಎಂದರು.

ಸಮಾನತೆ ಕೇವಲ ಭಾಷಣಕ್ಕೆ ಸೀಮಿತವಾಗದೆ, ಬದುಕಿನಲ್ಲೂ ಪಾಲನೆಯಾಗಬೇಕು. ಜಾತಿ ಆಧಾರಿತ ಮೇಲು-ಕೀಳು ಭಾವನೆ ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರು.

ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ಹೈದರಾಲಿ ವಿರುದ್ಧ ವೀರ ಮದಕರಿ ನಾಯಕರು ತೋರಿದ ಧೈರ್ಯ ಮತ್ತು ಸಾಹಸ ಸ್ಮರಣೀಯ. ಅವರ ಹೋರಾಟ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದರು.

ಮೀಸಲಾತಿ ಹೆಚ್ಚಳಕ್ಕೆ ಬಿಜೆಪಿ ಕೊಡುಗೆ:

ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಮಹತ್ವ ನೀಡಿದ ಬಿಜೆಪಿ ಸರ್ಕಾರ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಹಾಗೂ ಸಮುದಾಯದ ಅಭಿವೃದ್ಧಿಗೂ ಕೊಡುಗೆ ನೀಡಿದೆ ಎಂದರು.

ಅಶೋಕ ವಾಲ್ಮೀಕಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

ಈ ವೇಳೆ ವಿಪ ಸದಸ್ಯ ಲಿಂಗರಾಜ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಮೇಯರ್‌ ದುರ್ಗಮ್ಮ ಬಿಜವಾಡ, ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಬಿಜೆಪಿ ವಿಭಾಗ ಪ್ರಭಾರಿ ಜಯತೀರ್ಥ ಕಟ್ಟಿ, ಜಿ.ಎಂ. ಚಿಕ್ಕಮಠ, ಮಣಿಕಂಠ ಶ್ಯಾಗೋಟಿ, ಮಂಜುನಾಥ ಕಾಟಕರ್, ಮಾರುತಿ ಚಾಕಲಬ್ಬಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊನ್ನಾವರದಲ್ಲಿ ಅನಧಿಕೃತ ಬೋಟಿಂಗ್‌ ವ್ಯವಸ್ಥೆಗೆ ಆಕ್ರೋಶ
ಉಳಿಕೆಯ ಹಣ ಒಂದೇ ಕಡೆ ಹೂಡಿಕೆ ಸರಿಯಲ್ಲ: ಸಹನಾ ಬಾಳ್ಕಲ್