ಸತ್ಯದ ಜೀವನ ತೋರಿಸಿದ ವಾಲ್ಮೀಕಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Oct 18, 2024, 12:03 AM IST
17ಡಿಡಬ್ಲೂಡಿ1ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತವು  ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ.  | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ಅವರ ಜೀವನವನ್ನು ನಾವು ಅವಲೋಕಿಸಿದಾಗ ಸತ್ಯ ತಿಳಿದು ಬರುತ್ತದೆ. ಒಬ್ಬ ಬೇಟೆಗಾರ ವೃತ್ತಿಯ ವ್ಯಕ್ತಿ ಸತ್ಯದ ಅರಿವಾದಾಗ, ಒಂದು ಮಹಾಕಾವ್ಯ ಬರೆದು, ಮನುಕುಲಕ್ಕೆ ಮಾರ್ಗದರ್ಶಕನಾದ ಮತ್ತು ಋಷಿ ಮಹರ್ಷಿ ಎಂದು ಪ್ರಸಿದ್ಧಿ ಗಳಿಸಿದರು.

ಧಾರವಾಡ:

ಮಹರ್ಷಿ ವಾಲ್ಮೀಕಿ ಅವರ ಜೀವನವೇ ಒಂದು ಪಾಠ. ಅವರು ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಪ್ರತಿಯೊಬ್ಬರು ಜೀವನದಲ್ಲಿ ಎದುರಿಸುವ ಪ್ರಸಂಗಗಳನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ನಿತ್ಯವೂ ಸತ್ಯವಾಗಿರುವ ಜೀವನ ಮೌಲ್ಯಗಳ ಸಂದೇಶಗಳನ್ನು ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತವು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸೇರಿದಂತೆ ಹಲವು ಇಲಾಖೆಗಳ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪು ಮಾಡುವುದು ಸಹಜ; ಆದರೆ, ಅದರ ಅರಿವು ಮೂಡಿದಾಗ ತಿದ್ದುಕೊಂಡು ಮತ್ತೆ ತಪ್ಪದಂತೆ ಜೀವನದಲ್ಲಿ ಮುನ್ನಡೆಯಬೇಕು. ಮಹರ್ಷಿ ವಾಲ್ಮೀಕಿ ಅವರ ಜೀವನವನ್ನು ನಾವು ಅವಲೋಕಿಸಿದಾಗ ಇದೇ ಸತ್ಯ ತಿಳಿದು ಬರುತ್ತದೆ. ಒಬ್ಬ ಬೇಟೆಗಾರ ವೃತ್ತಿಯ ವ್ಯಕ್ತಿ ಸತ್ಯದ ಅರಿವಾದಾಗ, ಒಂದು ಮಹಾಕಾವ್ಯ ಬರೆದು, ಮನುಕುಲಕ್ಕೆ ಮಾರ್ಗದರ್ಶಕನಾದ ಮತ್ತು ಋಷಿ ಮಹರ್ಷಿ ಎಂದು ಪ್ರಸಿದ್ಧಿ ಗಳಿಸಿದರು ಎಂದರು.

ವಾಲ್ಮೀಕಿ ಅವರು ರಾಮಾಯಣವನ್ನು ಕಾವ್ಯರೂಪದಲ್ಲಿ ರಚಿಸಿದ್ದು, ಜೀವನಕ್ಕಿಂತ ಯಾವುದು ದೊಡ್ಡದಿಲ್ಲ. ಕೆಟ್ಟದನ್ನು ಮರೆತು ಒಳ್ಳೆಯದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ರಾಮಾಯಣ ಮಹಾಕಾವ್ಯದ ತಾತ್ಪರ್ಯವಾಗಿದೆ. ಸಾವಿರಾರು ಶ್ಲೋಕಗಳಿರುವ ಈ ಮಹಾಕಾವ್ಯ ರಚಿಸಿ, ಮಹರ್ಷಿ ವಾಲ್ಮೀಕಿ ಅವರು ಸಮಾಜ ಮಾರ್ಗದರ್ಶಿ ಆದರು ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಮನೋಹರ ಗುಡಸಲಮನಿ, ಚಂದ್ರಶೇಖರ ಜುಟ್ಟಲ, ಸುರೇಶ ಗುಂಡನವರ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ. ಶುಭಾ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಸಂಪನ್ಮೂಲ ಶಿಕ್ಷಕ ಶಿವಾನಂದ ಇಟಗಿ ಮಹರ್ಷಿ ವಾಲ್ಮೀಕಿ ಜೀವನ, ಆರ್ದಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಾಧಕರಿಗೆ ಸನ್ಮಾನ:

ಎಸ್ಸೆಸ್ಸೆಲ್ಸಿ, ಪಿಯುಸಿ ವಾರ್ಷಿಕ‌ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವೇದಿಕೆಯಲ್ಲಿನ ಗಣ್ಯರು ಸತ್ಕರಿಸಿದರು. ಶಾಲಾ ವಿದ್ಯಾರ್ಥಿಗಳು ಮಹಾಕಾವ್ಯದ ಪ್ರಸಂಗವನ್ನು ದೊಡ್ಡಾಟದ ಮೂಲಕ ಪ್ರಸ್ತುತ ಪಡಿಸಿದರು. ಹುಡಾ ಅಧ್ಯಕ್ಷ ಶಾಕೀರ ಸನದಿ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ತಹಸೀಲ್ದಾರ್‌ ಡಿ.ಎಚ್. ಹೂಗಾರ, ಡಿಡಿಪಿಐ ಎಸ್.ಎಸ್. ಕೆಳದಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸಮಾಜದ ಮುಖಂಡರಾದ ಕಲ್ಮೇಶ ಹಾವೇರಿಪೇಟ, ಪರಮೇಶ್ವರ ಕಟ್ಟಿಮನಿ, ಲಕ್ಷ್ಮಣ ಬಕ್ಕಾಯಿ, ಫಕೀರಪ್ಪ ಯಾದವಾಡ ಇದ್ದರು. ಆನಂದ ಹಿರೆಲಿಂಗಪ್ಪನವರ ಸ್ವಾಗತಿಸಿದರು. ಪ್ರವೀಣ ಮಸಾಗಿ ನಿರೂಪಿಸಿದರು. ಎಂ.ಬಿ. ಸಣ್ಣೇರ ವಂದಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?