ನರಗುಂದ: ಬನಹಟ್ಟಿ ಗ್ರಾಮದ ಬಹುತೇಕ ಬೇಡಿಕೆ ಈಡೇರಿಸಿದ್ದು, ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ವೆಚ್ಚ ಮಾಡುತ್ತಿದೆ. ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ ಸೇರಿದಂತೆ ಅನೇಕ ರೀತಿಯ ಖರ್ಚು ಮಾಡುತ್ತಿದೆ. ಈಗಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅವಶ್ಯವಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಟೆಕ್ಸ್ ಬುಕ್ಕಗಳನ್ನಾಗಿ ಮಾಡಬೇಕು. ಮಕ್ಕಳಿಗೆ ಆಸ್ತಿ ಮಾಡದೇ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಲದು ಅವರ ಚಲನವಲನ ಗಮನಿಸಬೇಕು.ಮಕ್ಕಳನ್ನು ದೇಶದ ಸಂಪನ್ಮೂಲವನ್ನಾಗಿ ಮಾಡಬೇಕೆಂದು ತಿಳಿಸಿದರು.
ಗ್ರಾಪಂ ಸದಸ್ಯ ಶಿವರಾಜ ಕಲ್ಲಾಪೂರ ಮಾತನಾಡಿ, ಗ್ರಾಮದ ಯುವಕರಿಗೆ ಭಾರತೀಯ ಸೈನ್ಯದಲ್ಲಿ ಸೇರಲು ದೈಹಿಕ ವ್ಯಾಯಾಮಕ್ಕೆ ಜಿಮ್ ವ್ಯವಸ್ಥೆ ಮಾಡಬೇಕು. ಗ್ರಾಮಕ್ಕೆ ಸಮೀಪವಿರುವ ಬೆಣ್ಣಿಹಳ್ಳವು ಹೂಳು ತುಂಬಿದ್ದರಿಂದ ಗ್ರಾಮಕ್ಕೆ ಪ್ರವಾಹದ ನೀರು ಬರುತ್ತಿದೆ.ಆ ಹೂಳನ್ನು ತೆಗೆಯಬೇಕು ಮತ್ತು ಅಲ್ಲಲ್ಲಿ ಉಳಿದಿರುವ ರಸ್ತೆ ಕೆಲಸ ಪೂರ್ಣಗೊಳಿಸಬೇಕೆಂದು ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಸೊಲಬಯ್ಯ ಸ್ವಾಮಿಗಳು, ಬಸಯ್ಯ ಹಿರೇಮಠ, ಬಿ.ಬಿ.ಕುಂಬಾರ, ಗುರಣ್ಣ ಆದೆಪ್ಪನವರ, ಕೆ.ಎಂ.ಹುದ್ದಾರ, ಗ್ರಾಪಂ ಅಧ್ಯಕ್ಷ ಚಂದ್ರಪ್ಪ ಜಾಧವ, ಜಯಮ್ಮ ತಳವಾರ, ಆರ್.ಬಿ.ಪಾಟೀಲ, ಭರಮಗೌಡ ಪಾಟೀಲ, ರುದ್ರಪ್ಪ ಬಂಡಿ ಹಾಗೂ ಗ್ರಾಪಂ ಸದಸ್ಯರು, ಸಹಾಯಕ ಎಂಜಿನಿಯರ್ ಮಾಲಿಪಾಟೀಲ, ಎಸ್. ವೈ. ಪಾಟೀಲ, ಪ್ರೊ.ಬಿ.ಸಿ.ಹನುಮಂತಗೌಡ್ರ ಇದ್ದರು.