- ಹೊನ್ನಾಳಿಯಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಭಿಮತ
- - -ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ಮನುಕುಲಕ್ಕೆ ಮೌಲ್ಯಾಧಾರಿತ ಬದುಕು ಮತ್ತು ಸಾಹಿತ್ಯ ಕೊಟ್ಟವರು ದಾಸಶ್ರೇಷ್ಠ ಕನಕದಾಸರು. ನಾಡಿನ ಎಲ್ಲ ಮಹಾನ್ ಪುರುಷರು ಜಾತಿಗಾಗಿ ಹೋರಾಡದೇ ಅವರು ನೀತಿಗಾಗಿ, ಮನುಕುಲದ ಒಳಿತಿಗಾಗಿ ಮಾತ್ರ ಹೋರಾಟ ನಡೆಸಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಕನಕ ರಂಗಮಂದಿರದಲ್ಲಿ ತಾಲೂಕು ಅಡಳಿತ ಮತ್ತು ತಾಲೂಕು ಕುರುಬ ಸಮಾಜ ವತಿಯಿಂದ ಏರ್ಪಡಿಸಿದ್ದ ಕನಕದಾಸರ 538ನೇ ಜಯಂತಿ ಕಾರ್ಯಕ್ರಮವನ್ನು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರೊಟ್ಟಿಗೆ ಸಾಂಪ್ರದಾಯಕ ವಾದ್ಯವಾದ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿನ ಕನಕನ ಕಿಂಡಿ ಇದೆ. ಇದು ನಿರ್ಮಲ ಭಕ್ತಿಗೆ ಒಲಿದು ಭಗವಂತನೇ ಹಿಂದಕ್ಕೆ ತಿರುಗಿ ಭಕ್ತ ಕನಕನಿಗೆ ದರ್ಶನ ನೀಡಿದ ಭಕ್ತಿಯ ಸಂಕೇತ. ಇಂತಹ ಉದಾಹರಣೆ ಜಗತ್ತಿನಲ್ಲಿ ಎಲ್ಲೂ ಇಲ್ಲ. ತಹಸೀಲ್ದಾರ್ ಕಚೇರಿ ಮೇಲೆ ಶೀಟ್ ಮೇಲ್ಚಾವಣಿ ಹಾಕಲಾಗಿದ್ದು, ಅಲ್ಲಿನ ವಿಶಾಲವಾದ ಜಾಗದಲ್ಲಿ ಮುಂದಿನ ವರ್ಷದಿಂದ ವ್ಯವಸ್ಥಿತವಾಗಿ ಎಲ್ಲ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, 25 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಕುರುಬ ಸಮಾಜದವರು ಇಂದಿನ ಕಾರ್ಯಕ್ರಮದಲ್ಲಿ ತೀರಾ ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಪೂರ್ವಭಾವಿ ಸಭೆಗಳಲ್ಲಿ ಭಾರಿ ಮಾತನಾಡಿದ ಯಾವ ಮುಖಂಡರೂ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದು ತುಂಬಾ ಬೇಸರ ಸಂಗತಿ. ಕನಕದಾಸರು ಹುಟ್ಟಿನಿಂದ ಕೆಳವರ್ಗಕ್ಕೆ ಸೇರಿದರೂ ಕಾವ್ಯ, ಕೀರ್ತನೆಗಳ ರಚನೆಯಿಂದ ದಾಸವರೇಣ್ಯ ಗೌರವಕ್ಕೆ ಪಾತ್ರರಾದ ದಾಸಶ್ರೇಷ್ಠರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ ಮಾತನಾಡಿ, 16ನೇ ಶತಮಾನದಲ್ಲಿ ಭಕ್ತಿಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ಪ್ರಮುಖರಾಗಿ, ಸಮುದಾಯಕ್ಕೆ ದಾರಿದೀಪವಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ಬಣ್ಣಿಸಲಾಗಿದೆ ಎಂದರು.ಗೊಲ್ಲರಹಳ್ಳಿ ಮಂಜುನಾಥ್ ಕನಕದಾಸರ ಬದುಕು- ಜೀವನ ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಸಿ. ಮೋಹನ್, ಹಾಲುಮತ ಮಹಾಸಭಾ ಅಧ್ಯಕ್ಷ ರಾಜು ಕಣಗಣ್ಣಾರ, ತಹಸೀಲ್ದಾರ್ ರಾಜೇಶ್ ಕುಮಾರ್, ಮುಖಂಡ ಎಂ.ಆರ್.ಮಹೇಶ್, ಧರ್ಮಪ್ಪ, ಮಹಿಳಾ ಮುಖಂಡೆ ಸೌಮ್ಯ ಇತರರು ಮಾತನಾಡಿದರು.
ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮವಿಜೇಂದ್ರಪ್ಪ, ಸದಸ್ಯರು, ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್, ಕೂಲಂಬಿ ವಾಗೀಶ್, ನರಸಿಂಹಪ್ಪ ಪುಟ್ಟಪ್ಪ, ವಾಸಪ್ಪ, ಬಾವಿಮನೆ ರಾಜಪ್ಪ, ಚಂದ್ರಗುಂಡ, ವಿಜೇಂದ್ರಪ್ಪ ಇತರರು ಇದ್ದರು.ಕನಕ ವೇಷಧಾರಿ ವಿದ್ಯಾರ್ಥಿಗೆ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಸ್ವಾಗತಿಸಿದರು. ವೀರೇಶ್ ನಿರೂಪಿಸಿ, ಕುಮಾರ್ ಬಾರ್ಕಿ ವಂದಿಸಿದರು.
- - -(ಕೋಟ್) ಶಾಲಾ- ಕಾಲೇಜುಗಳಲ್ಲಿಯೂ ಮಹಾತ್ಮರ ಜಯಂತಿ ಆಚರಣೆ ಸಂದರ್ಭದಲ್ಲಿ ಅವರ ಕೃತಿಗಳು, ಜೀವನ ಸಾಧನೆಗಳ ಪರಿಚಯಿಸುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಅವುಗಳನ್ನು ಮಕ್ಕಳು ಓದುವಂತೆ ನೋಡಿಕೊಳ್ಳಬೇಕು. ಕನಕ ದಾಸರ ಜೀವನದ ಅನೇಕ ಘಟನೆಗಳು ಎಲ್ಲರಿಗೂ ಉತ್ತಮ ಪಾಠವಾಗಿವೆ
- ಡಿ.ಜಿ. ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.- - -
-8ಎಚ್.ಎಲ್.ಐ1.ಜೆಪಿಜಿ:ಕನಕದಾಸ ಜಯಂತಿ ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.