ಕನ್ನಡಪ್ರಭ ವಾರ್ತೆ ಯಾದಗಿರಿ
ಕೈ, ಕಮಲ ಪಕ್ಷಗಳ ನಡುವಿನ ಜಿದ್ದಾಜಿದ್ದಿಯಿಂದಾಗಿ ಯಾದಗಿರಿಯಲ್ಲಿ ವಂದೇ ಭಾರತ್ ರೈಲು ನಿಲುಗಡೆ ವಿಚಾರ ಗಜಪ್ರಸವದಂತೆ ಭಾಸವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಇಲಾಖೆಗೆ ಒಂದಿಷ್ಟು ಬಿಸಿ ಮುಟ್ಟಿಸಿದಂತಿದೆ.
ಈ ರೈಲು ನಿಲುಗಡೆಯ ಕ್ರೆಡಿಟ್ಟಿಗಾಗಿ ಆಯಾ ಪಕ್ಷಗಳು ಆಂತರಿಕ ತಿಕ್ಕಾಟ ನಡೆಸಿದ್ದವು. ರಾಯಚೂರು ಹಾಗೂ ಕಲಬುರಗಿ ಸಂಸದರು ಕಾಂಗ್ರೆಸ್ ಪಕ್ಷದವರು. ಇವರು ಚಾಲನೆ ನೀಡಿದರೆ ಕೈ ಪಕ್ಷಕ್ಕೆ ಅದರ ಕ್ರೆಡಿಟ್ಟು ಹೋಗಬಹುದೆಂಬ ಕಾರಣಕ್ಕೇನೋ, ಶನಿವಾರ (ಜು.27) ನಿಗದಿಯಾಗಿದ್ದ ರೈಲು ನಿಲುಗಡೆ ಆದೇಶ ರದ್ದಾಗಿತ್ತು. ರೈಲು ನಿಲ್ಲಿಸದರೆ ತಮಗೆ ಲಾಭ ಅನ್ನೋ ವಿಚಾರ ಕಾಂಗ್ರೆಸ್ ಪಕ್ಷದ್ದಾಗಿತ್ತು ಎನ್ನಲಾಗಿದೆ."ಕೈ, ಕಮಲ ಜಿದ್ದು, ರೈಲು ನಿಲುಗಡೆ ರದ್ದು ಶೀರ್ಷಿಕೆಯಡಿ "ಕನ್ನಡಪ್ರಭ " ಇಂದು ಶನಿವಾರ (ಜು.27) ಈ ಕುರಿತ ಸುದ್ದಿ ಪ್ರಕಟಿಸಿತ್ತು. ರೈಲು ಮಂತ್ರಿ ಸೋಮಣ್ಣರಿಗಾಗಿ ನಿಲುಗಡೆ ಮುಂದೂಡಿಕೆಯೇ ಎಂಬಂಶ ಸುದ್ದಿಯಲ್ಲಡಗಿತ್ತು. ರೈಲು ನಿಲ್ಲಿಸುತ್ತಾರೋ ? ಮತ್ತದೇ ಹಿಂದಿನಂತೆ ರೀಲು ಬಿಡುತ್ತಾರೋ.. ಕಾದು ನೋಡಬೇಕಿದೆ.