ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡುಬಂದಿದ್ದು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ: ಗ್ರಾಮ ಆಡಳಿತ ಅಧಿಕಾರಿ (ವಿಎಒ) ನೇಮಕಾತಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಅಕ್ರಮ ಎಸಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡುಬಂದಿದ್ದು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಮೇಲ್ವಿಚಾರಕ, ಡ್ರೆಸ್‌ಕೋಡ್ ಅಧಿಕಾರಿ ಹಾಗೂ ವೀಕ್ಷಕರಿಗೆ ನೋಟಿಸ್ ನೀಡಲಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ನಾಲ್ವರಿಂದಲೂ ವಿವರಣೆ ಕೇಳಲಾಗಿದೆ. ಅವರ ಉತ್ತರ ಬಂದ ಬಳಿಕ ಮುಂದಿನ ಶಿಸ್ತು ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಾಮರ್ ಇದ್ದರೂ ಮೊಬೈಲ್ ಕಾರ್ಯನಿರ್ವಹಿಸಿದ್ದೇಕೆ?
ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಅಳವಡಿಸಿದ್ದರೂ ಮೊಬೈಲ್ ಹೇಗೆ ಕಾರ್ಯನಿರ್ವಹಿಸಿತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಜಾಮರ್ ಸ್ಥಗಿತಗೊಳಿಸಲಾಗಿತ್ತೇ ಅಥವಾ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲವೇ ಎಂಬ ಆಯಾಮದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ.
ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗಿದೆ. ಕೇಂದ್ರದ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುವುದು. ಪ್ರಿಸ್ಕಿಂಗ್ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆಯೂ ಪರಿಶೀಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಅಗತ್ಯಬಿದ್ದರೆ ಸಂಬಂಧಿಸಿದ ಪರೀಕ್ಷಾ ಕೇಂದ್ರವನ್ನೇ ರದ್ದುಗೊಳಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ಸದ್ಯ ನಾಲ್ವರು ಅಧಿಕಾರಿಗಳಿಂದ ಶೋಕಾಸ್ ನೋಟಿಸ್‌ಗೆ ಉತ್ತರ ನಿರೀಕ್ಷಿಸಲಾಗುತ್ತಿದೆ. ಅವರ ವಿವರಣೆ ಹಾಗೂ ತನಿಖೆಯ ಪ್ರಗತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.