ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಅದರ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ನ.4ರಂದು ಹಾವೇರಿಯ ಹುಕ್ಕೇರಿ ಮಠದಲ್ಲಿ ಜನಪ್ರತಿನಿಧಿಗಳು ಹಾಗೂ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ.
ಕನ್ನಡಪ್ರಭ ವಾರ್ತೆ ಹಾವೇರಿ
ಬೇಡ್ತಿ ವರದಾ ನದಿ ಜೋಡಣೆ ಯೋಜನೆ ಕುರಿತು ಜನಜಾಗೃತಿ ಮೂಡಿಸುವುದು ಹಾಗೂ ಅದರ ತ್ವರಿತ ಅನುಷ್ಠಾನಕ್ಕೆ ಒತ್ತಾಯಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ನ.4ರಂದು ಹಾವೇರಿಯ ಹುಕ್ಕೇರಿ ಮಠದಲ್ಲಿ ಜನಪ್ರತಿನಿಧಿಗಳು ಹಾಗೂ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ ಮಾಜಿ ಸಂಸದ ಹಾಗೂ ವರದಾ-ಬೇಡ್ತಿ-ಧರ್ಮಾ ನದಿ ಜೋಡಣೆ ಮತ್ತು ನೀರಾವರಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಕುನ್ನೂರ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಲ್ಲಿನ ಕೆಲವು ಮುಖಂಡರು ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯನ್ನು ವಿರೋಧಿಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ. ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯೆಂದು ನಿರ್ಧರಿಸಲಾಗಿದೆ. ನದಿ ಜೋಡಣೆಯ ಡಿಪಿಆರ್ ಸಿದ್ಧಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಒಪ್ಪಂದವಾಗಿರುವುದು ಸಂತಸದ ಸಂಗತಿ.
ಉತ್ತರ ಕನ್ನಡದವರ ಪ್ರತಿಭಟನೆ ಸರಿ ಅಲ್ಲ:
ಬೇಡ್ತಿ ನದಿಯಲ್ಲಿ ನೀರಿಲ್ಲ ಎಂಬ ಉತ್ತರ ಕನ್ನಡ ಭಾಗದ ಜನರ ಹೇಳಿಕೆಗಳು ವಾಸ್ತವ ಸ್ಥಿತಿಗೆ ತದ್ವಿರುದ್ಧವಾಗಿವೆ. ನಾವು ನದಿ ಜೋಡಣೆಯ ಡಿಪಿಆರ್ ಅನ್ನು ಶೀಘ್ರ ಸಿದ್ಧಪಡಿಸುವಂತೆ ಒತ್ತಾಯಿಸುತ್ತಿರುವ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆಯವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೇಡ್ತಿ ನದಿ ತಿರುವು ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿರುವುದು ಸರಿ ಅಲ್ಲ ಎಂದರು.
ಪ್ರತಿಭಟನೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹಾಗೂ ತೇಜಸ್ವಿನಿ ಅನಂತಕುಮಾರ್ ಅವರು ಭಾಗವಹಿಸಿದ್ದರು. ಅವರು ಉತ್ತರ ಕನ್ನಡ ಜಿಲ್ಲೆಯವರೂ ಅಲ್ಲ. ರೈತರ ಸಮಸ್ಯೆಗಳು ಹಾಗೂ ನೀರಿನ ಮಹತ್ವದ ಬಗ್ಗೆ ಅರಿವಿಲ್ಲದವರು ಎಂದು ಟೀಕಿಸಿದರು. ಬೆಂಗಳೂರಿನಲ್ಲಿ ಕುಳಿತು ಇಂತಹ ಯೋಜನೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೇಳಿಕೆ ನೀಡುವುದು ಶೋಭೆಯಲ್ಲ. ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿ ಅನಂತ ಹೆಗಡೆ ಅಶೀಸರ ಹಾಗೂ ಸ್ವರ್ಣವಲ್ಲಿ ಶ್ರೀಗಳು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ್ ಅವರು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ನೀರಿನ ಹರಿವಿನ ಬಗ್ಗೆ ಮಾಹಿತಿಯೇ ಇಲ್ಲ ಎಂದು ಹೇಳಿರುವುದು ಸತ್ಯಕ್ಕೆ ದೂರವಾಗಿದೆ. ಇಂತಹ ಹೇಳಿಕೆಗಳನ್ನು ನೀಡಿ ಜನರ ಹಾಗೂ ಸರ್ಕಾರದ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.
ರಸ್ತೆ ಬಂದ್ ಮಾಡಿ ಪ್ರತಿಭಟಿಸುವ ಎಚ್ಚರಿಕೆ:
ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಯಾವುದೇ ಧಕ್ಕೆಯಾಗದಿದ್ದರೂ ಅಲ್ಲಿನವರು ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವುದು ಸೂಕ್ತವಲ್ಲ. ಅವರ ನಿಲುವನ್ನು ವಿರೋಧಿಸಿ ನಮ್ಮ ಭಾಗದ ಜನರು ಜಾಗೃತರಾಗಿ ಬೀದಿಗಿಳಿಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ಸೋಮಶೇಖರ ಕೊತ್ತಂಬರಿ, ಈರಣ್ಣ ಬಡ್ಡಿ, ಸುರೇಶ ಛಲವಾದಿ, ಶಿವಬಸಪ್ಪ ಗೋವಿ ಹಾಗೂ ಶಿವಯೋಗಿ ಹೊಸಗೌಡ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.